ಹಾರೈಕೆ

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್‍-ಕನ್ನಡ ನಿಘಂಟು ಸುಮಾರು ಆರೂವರೆ ಸಾವಿರ ಪುಟಗಳಿಗಿಂತಲೂ ಹೆಚ್ಚು ವ್ಯಾಪಕವಾಗಿದ್ದು ಈಗಾಗಲೆ ನಾಲ್ಕು ಬೃಹತ್‍ ಸಂಪುಟಗಳಲ್ಲಿ ಪ್ರಕಟವಾಗಿದೆ. ಪ್ರಾಯಃ ಭಾರತೀಯ ಭಾಷೆಗಳಲ್ಲೇ ಅದ್ವಿತೀಯವಾದ ದ್ವಿಭಾಷಾ ನಿಘಂಟೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ನಿಘಂಟು ರಚನೆಯ ಕಾರ್ಯ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದ್ದು ಈ ಸಂಪುಟಗಳಿಗೆಲ್ಲ ಮೂಲಾಧಾರವಾಗಿದ್ದ ಕೋಶ ೧೯೪೦ರ ದಶಕದಲ್ಲಿ ಮೊಟ್ಟಮೊದಲಿಗೆ ಹೊರಬಂದಿತ್ತು. ದಶಕಗಳು ಉರುಳಿದಂತೆ ಕೋಶವನ್ನು ಹೊಸ ಅಗತ್ಯಗಳಿಗೆ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಎದುರಾದುದರಿಂದ ಇಂಗ್ಲಿಷ್‍-ಕನ್ನಡ ನಿಘಂಟು ಪರಿಷ್ಕರಣ ಯೋಜನೆ ೧೯೬೬ರಲ್ಲಿ ಪ್ರಾರಂಭಗೊಂಡು ತದನಂತರ ಅನುಕ್ರಮವಾಗಿ A-D, E-L, M-R ಮತ್ತು S-Z ಈ ನಾಲ್ಕು ಸಂಪುಟಗಳು ಹೊರಬಂದವು. ಓದುಗ ವೃಂದದಿಂದ ಈ ಸಂಪುಟಗಳಿಗೆ ಅಪಾರವಾದ ಮೆಚ್ಚುಗೆ ದೊರೆತಿದೆ.

ಇಂದಿನ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಜನಪ್ರಿಯ ಇಂಗ್ಲಿಷ್‍ – ಕನ್ನಡ ನಿಘಂಟಿನ ಅಡಕ ಮುದ್ರಿಕೆ (CD) ಆವೃತ್ತಿಯನ್ನು ಹೊರತರುವುದು ಸಮಯೋಚಿತವಾಗಿ ಕಂಡುಬಂದುದರಿಂದ ಈ ದಿಶೆಯಲ್ಲಿ ಕಳೆದ ವರ್ಷ ಕೆಲಸ ಪ್ರಾರಂಭಿಸಲಾಯಿತು. ಇದೀಗ ಇಂಗ್ಲಿಷ್‍ – ಕನ್ನಡ ನಿಘಂಟಿನ ಅಡಕ ಮುದ್ರಿಕೆ ಆವೃತ್ತಿಯನ್ನು ಸಹ ಓದುಗರಿಗೆ ಕೊಡಲು ಸಾಧ್ಯವಾಗುತ್ತಿರುವುದು ನನಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ. ನಿಘಂಟುವಿನ ನಾಲ್ಕೂ ಸಂಪುಟಗಳನ್ನು ಈ ಅಡಕ ಮುದ್ರಿಕೆ ಅವತರಣಿಕೆ ಹೈಪರ್‍ಲಿಂಕ್ಸ್‍ ಸಹಿತವಾಗಿ ಒಳಗೊಂಡಿದೆ. ಮೂಲ ನಿಘಂಟಿನ ಚಿತ್ರಗಳನ್ನು ಪುನಾರಚಿಸಿ ವರ್ಣರಂಜಿತಗೊಳಿಸಿದ್ದಲ್ಲದೆ ಕೆಲವು ಹೊಸ ಚಿತ್ರಗಳನ್ನು ಸೇರಿಸಲಾಗಿದೆ. ಉಚ್ಚಾರಣೆಗೆ ಅನುಕೂಲವಾಗಲು ಧ್ವನಿ ಸಹಾಯವನ್ನು ಎಲ್ಲಾ ಇಂಗ್ಲಿಷ್‍ ಮುಖ್ಯ ಪದಗಳಿಗೆ ಕೊಡಲಾಗಿದೆ. ವಿಖ್ಯಾತ ಗಣಕ ಶಾಸ್ತ್ರಜ್ಞ ಡೊನಾಲ್ಡ್ ನೂತ್‍ ಅವರ ಪ್ರಸಿದ್ಧ TeX(ಟೆಕ್‍) ತಂತ್ರಾಂಶವನ್ನು ಲೀಲಾವತಿ ಟ್ರಸ್ಟ್‍ ಕನ್ನಡಕ್ಕೆ ಅಳವಡಿಸಿದ್ದು ಅದರ ಪೂರ್ಣ ಸಾಮರ್ಥ್ಯವನ್ನು ಈ ಅವತರಣಿಕೆ ಸಿದ್ಧಪಡಿಸುವಲ್ಲಿ ಉಪಯೋಗಿಸಲಾಗಿದೆ.

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಾಗುವ ಬೆಳವಣಿಗೆಯ ಲಾಭಗಳನ್ನು ನಮ್ಮ ಸಮಾಜದ ಅಭಿವೃದ್ಧಿಗೆ ಬಳಸುವುದು ಅತ್ಯವಶ್ಯ. ಮೈಸೂರು ವಿಶ್ವವಿದ್ಯಾನಿಲಯವು ಪ್ರಿಸಂ ಬುಕ್ಸ್‍ ಹಾಗೂ ಲೀಲಾವತಿ ಟ್ರಸ್ಟ್ ಸಹಯೋಗದೊಂದಿಗ ಹೊರತರುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ ಹೆಮ್ಮೆಯ ಪ್ರಕಟಣೆಯಾದ ಇಂಗ್ಲಿಷ್‍-ಕನ್ನಡ ನಿಘಂಟುವಿನ ಅಡಕ ಮುದ್ರಿಕೆ ಅವತರಣಿಕೆ ಈ ದಿಶೆಯಲ್ಲಿ ಒಂದು ಹೆಜ್ಜೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಕಾರಕ ಬೆಳವಣಿಗೆಗಳನ್ನು ನಮ್ಮ ಕನ್ನಡ ಭಾಷೆಗೆ ಅಳವಡಿಸುವ ಯೋಜನೆಗಳಲ್ಲಿ ಇದು ಒಂದು ಮಹತ್ತರವಾದ ಪ್ರಯತ್ನ.

ಇಂದು ಕಂಪ್ಯೂಟರ್‍ ಬಳಕೆ ನಾಡಿನ ಮೂಲೆಮೂಲೆಗಳಿಗೂ ವ್ಯಾಪಿಸಿ ನಮ್ಮ ಗ್ರಾಮಾಂತರ ಪ್ರದೇಶಗಳು ಕೂಡ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿರುವ ಸಂದರ್ಭದಲ್ಲಿ ಇಂಗ್ಲಿಷ್‍ – ಕನ್ನಡ ನಿಘಂಟಿನ ಅಡಕ ಮುದ್ರಿಕೆಯ ಆವೃತ್ತಿ ಹೊರಬರುತ್ತಿರುವುದು ಜ್ಞಾನದಿಗಂತಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಮಹತ್ತರವಾದ ಹೆಜ್ಜೆ ಯೆಂಬುದರಲ್ಲಿ ಸಂಶಯವಿಲ್ಲ.

ಈ ಅಡಕ ಮುದ್ರಿಕೆ ಆವೃತ್ತಿಯನ್ನು ಹೊರತರುವಲ್ಲಿ ಶ್ರಮಿಸಿದ ಎಲ್ಲ ಸಹೋದ್ಯೋಗಿ ಬಂಧುಗಳನ್ನೂ, ಈ ಆವೃತ್ತಿಯ ಪ್ರಕಟನಪೂರ್ವ ತಾಂತ್ರಿಕ ಕೆಲಸಗಳನ್ನು ನಿರ್ವಹಿಸಿದ ಲೀಲಾವತಿ ಟ್ರಸ್ಟ್‍, ಬೆಂಗಳೂರು, ಶ್ರೀರಂಗ ಡಿಜಿಟಲ್‍ ಸಾಫ್ಟ್‍ವೇರ್‍ ಟೆಕ್ನಾಲಜೀಸ್‍, ಶ್ರೀರಂಗಪಟ್ಟಣ, ಈ ಸಂಸ್ಥೆಗಳನ್ನೂ, ಹಾಗೂ ಇದನ್ನು ಹೊರತರಲು ನೆರವಾಗುತ್ತಿರುವ ಪ್ರಿಸಂ ಬುಕ್ಸ್‍, ಬೆಂಗಳೂರು, ಇವರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸುವರ್ಣ ಕರ್ನಾಟಕ ಮಹೋತ್ಸವದ ಆಚರಣೆಯ ಸಂಭ್ರಮದ ಸುಸಂದರ್ಭದಲ್ಲಿ ಹೊರಬರುತ್ತಿರುವ ಈ ಇಂಗ್ಲಿಷ್‍-ಕನ್ನಡ ನಿಘಂಟಿನ ಸಿ.ಡಿ. ಆವೃತ್ತಿಯನ್ನು ಓದುಗರು ಪ್ರೀತ್ಯಾದರಗಳಿಂದ ಸ್ವಾಗತಿಸುತ್ತಾರೆಂದು ಭಾವಿಸುತ್ತೇನೆ.

ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು
ಪ್ರೊ.ಜೆ. ಶಶಿಧರ ಪ್ರಸಾದ್‍
ಕುಲಪತಿ

© 2016 University of Mysore.