ಆಕ್ಸ್‌ಫ಼ರ್ಡ್‍ ಇಂಗ್ಲಿಷ್‍ ಡಿಕ್ಷನರಿ*

ತೀ. ನಂ. ಶ್ರೀಕಂಠಯ್ಯ

* `ಪ್ರಬುದ್ಧ ಕರ್ಣಾಟಕ' 16.1

ಸುಮಾರು ಒಂಬತ್ತು ತಿಂಗಳ ಕೆಳಗೆ, ೧೯೩೩ನೆಯ ನವೆಂಬರ್‍ ೧೪ನೆಯ ದಿನ, ಇಂಗ್ಲಿಷ್‍ ಗ್ರಂಥವೊಂದರ `ಪರಿಶಿಷ್ಟ'ವು (Supplement) ಹೊರಬಿದ್ದು ಅದನ್ನು ಪೂರ್ಣಗೊಳಿಸಿತು. ಈ ಪರಿಶಿಷ್ಟದಲ್ಲಿಯೇ ೯೦೪ ಪುಟಗಳಿವೆಯೆಂದ ಮೇಲೆ ಮುಖ್ಯಕೃತಿಯ ವಿಷಯದಲ್ಲಿ ಯಾರಿಗಾದರೂ ಕುತೂಹಲವು ಕೆರಳುತ್ತದೆ. ಅದು ``ನಿಘಂಟುಗಳ ನ್ಯಾಯಾಧೀಶ್ವರ'' (The Lord Chancellor among Dictionaries) ಎಂಬ ಬಿರುದನ್ನು ಪಡೆದಿರುವ `ಆಕ್ಸ್‌ಫ಼ರ್ಡ್‍ ಇಂಗ್ಲಿಷ್‍ ಡಿಕ್ಷನರಿ.' ಇದರಷ್ಟು ದೀರ್ಘಕಾಲ ಮತ್ತೆ ಯಾವ ಗ್ರಂಥದ ರಚನೆಯೂ ಹಿಡಿದಿರಲಾರದು. ಇಂಥ ಮಹಾ ನಿಘಂಟನ್ನು ನಿರ್ಮಿಸಬೇಕೆಂದು ಆಲೋಚನೆ ಇಂಗ್ಲಿಷ್‍ ಭಾಷಾವಿಶಾರದರಿಗೆ ಹುಟ್ಟಿದ್ದು ೧೮೫೭ರಲ್ಲಿ. ಅಂದಿನಿಂದ ಶಬ್ದಗಳನ್ನೂ ಪ್ರಯೋಗೋದಾಹರಣೆಗಳನ್ನೂ ಶೇಖರಿಸಿ, ನಡುವೆ ಒದಗಿದ ತೊಡಕುಗಳನ್ನು ಪರಿಹರಿಸಿ, ಒಬ್ಬ ಮುಖ್ಯ ಸಂಪಾದಕನನ್ನು ಗೊತ್ತು ಮಾಡಿ, ಆತನ ಕೈಗೆ ಗ್ರಂಥದ ಭಾರವನ್ನು ಒಪ್ಪಿಸಿದ್ದು ೧೮೭೮ ರಲ್ಲಿ. ಮುಖ್ಯಕೃತಿಯ ಕೊನೆಯ ಸಂಪುಟ ಹೊರಬಿದ್ದದ್ದು ೧೯೨೮ ರಲ್ಲಿ. ಈ ನಿಲುಗಡೆಯನ್ನು ಕಾಣುವುದಕ್ಕೆ ಎಷ್ಟೋ ಮುಂಚೆಯೇ ಈ ನಿಘಂಟಿನ ಪ್ರವರ್ತಕರೆಲ್ಲರೂ, ಮುಖ್ಯ ಸಂಪಾದಕರಲ್ಲಿ ಇಬ್ಬರೂ ತಮ್ಮ ದೀರ್ಘ ಜೀವನಗಳನ್ನು ಮುಗಿಸಿದ್ದರು. ಇದಕ್ಕೆ ಗ್ರಂಥದ ಅಪಾರತೆಯೇ ಕಾರಣ. ಮುಖ್ಯಕೃತಿಯ ಪುಟಗಳು ೧೫,೪೮೭. ಒಂದೊಂದು ಪುಟದಲ್ಲೂ ಸರಾಸರಿ ೧೧೨ ಪಂಕ್ತಿಗಳ ಕಲಂಗಳು (columns) ಮೂರು. ಅವುಗಳಲ್ಲಿ ಒಟ್ಟು ಐದು ಕೋಟಿ ಪದಗಳು ಅಡಕವಾಗಿವೆ. ಅಲ್ಲಿ ಅಚ್ಚಾಗಿರುವ ಅಕ್ಷರದ ಮೊಳೆಗಳನ್ನು ಒಂದರ ಮಗ್ಗುಲಲ್ಲಿ ಒಂದರಂತೆ ಜೋಡಿಸುತ್ತಾ ಹೋದರೆ ೧೭೮ ಮೈಲಿ ಉದ್ದವಾಗಬಹುದು. ಈ ಗ್ರಂಥಕ್ಕೆ ಮುಖ್ಯ ಸಂಪಾದಕರು ನಾಲ್ಕು ಜನ (ಅವರಲ್ಲಿ ಈಗ ಇಬ್ಬರು ಮಾತ್ರ ಬದುಕಿದ್ದಾರೆ); ಉಪಸಂಪಾದಕರು ಮೂವತ್ತು ಮಂದಿ; ``ಪ್ರಯೋಗ''ಗಳನ್ನು ಒದಗಿಸಿಕೊಟ್ಟವರೂ ಇತರ ವಿಧಗಳಲ್ಲಿ ಸಹಕರಿಸಿದವರೂ ೧೩,೦೦೦ ಕ್ಕೆ ಮೇಲ್ಪಟ್ಟಿದ್ದಾರೆ. ಗ್ರಂಥವು ಆಗಲೇ ಪುನರ್ಮುದ್ರಣ ಹೊಂದಿ, ಈಗ ೧೩ ಸಂಪುಟಗಳಲ್ಲಿ ಅಡಕವಾಗಿದೆ; ಇದರ ಬೆಲೆ ೩೧೫ ರೂಪಾಯಿಗಳು. ಒಟ್ಟು ಗ್ರಂಥದ ನಿರ್ಮಾಣಕ್ಕೆ ೪೦ ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಷ್ಟು ವೆಚ್ಚವಾಗಿದೆಯೆಂದು ಕೇಳಿದರೆ ಆ ಬೆಲೆ ಅತ್ಯಲ್ಪವೆನ್ನಿಸುತ್ತದೆ. ಆರನೆಯ ಸಂಪುಟದ ಮುದ್ರಣಕ್ಕಾಗಿ ಬಂದ ೫,೦೦೦ ಪೌಂಡುಗಳ ದತ್ತಿಯೊಂದನ್ನುಳಿದು ಮಿಕ್ಕ ಬಂಡವಾಳವನ್ನೆಲ್ಲಾ ಒದಗಿಸಿ, ಈ ಮಹಾಗ್ರಂಥದ ಮುದ್ರಣವನ್ನೂ ಪ್ರಕಾಶನವನ್ನೂ ಕೈಕೊಂಡ ಸಾಹಸಿಗಳು ಆಕ್ಸ್‌ಫ಼ರ್ಡ್‍ ಯೂನಿವರ್ಸಿಟಿ ಪ್ರೆಸ್ಸಿನವರು.

ನಿಘಂಟುಗಳಲ್ಲಿ ಜನಸಾಮಾನ್ಯಕ್ಕೆ ಗೌರವ ಹುಟ್ಟುವುದು ಅಪೂರ್ವ; ನಿಘಂಟು ಒಂದು ಗ್ರಂಥವೆಂದು ಒಪ್ಪದವರೇ ಹಲವರಿದ್ದಾರು. ಅವರ ಪಾಲಿಗೆ ಅದೊಂದು ಶಬ್ದಗಳ ಕಂತೆ. ರೈಲು ಎಷ್ಟು ಗಂಟೆಗೆ ಹೊರಡುವುದೆಂದು ನೋಡುವುದಕ್ಕೆ `ರೈಲ್ವೆ ಗೈಡ'ನ್ನು ಕುರಿಯುವ ಹಾಗೆ, ಯಾವುದಾದರೂ ಒಂದು ಶಬ್ದವನ್ನೋ ಅದರ ಅರ್ಥವನ್ನೋ ಅನಿವಾರ್ಯವಾಗಿ ತಿಳಿಯಬೇಕಾದಾಗ-ಉದಾಹರಣೆಗೆ, ಚಕ್ರಬಂಧ ಸ್ಪರ್ಧೆಗಳಿಗಾಗಿ (cross-word competitions) — ನಿಘಂಟನ್ನು ಹುಡುಕುತ್ತಾರೆ. ಆ ಅಗತ್ಯವು ತೀರಿದ ಕೂಡಲೆ ನಿಘಂಟಿನಲ್ಲಿ ಅವರಿಗಿರುವ ಆಸಕ್ತಿಯೂ ತೀರಿತು. ನಿಘಂಟುರಚನೆ ಎಷ್ಟು ಕಷ್ಟ, ಅದರ ಸಮಸ್ಯೆಗಳು ಎಷ್ಟು ವಿಪುಲ, ಕ್ಲಿಷ್ಟ ಎಂಬುದರ ಕಲ್ಪನೆ ಅವರಿಗೆ ಸಾಮಾನ್ಯವಾಗಿ ಇರುವುದಿಲ್ಲ. ಆದರೆ `ಆಕ್ಸ್‌ಫ಼ರ್ಡ್‍ ಡಿಕ್ಷನರಿ'ಯಂಥ ಒಂದು ನಿಘಂಟಿನ ನಿರ್ಮಾಣಕ್ಕೆ ಮುಕ್ಕಾಲು ಶತಮಾನ ಹಿಡಿದು, ಅದು ಮುಗಿದ ವೇಳೆಯಲ್ಲಿ ಇಂಗ್ಲಿಷ್‍ ಸಾಹಿತ್ಯ ಪ್ರಪಂಚದೊಳಗೆ ಒಂದು ದೊಡ್ಡ ಕೋಲಾಹಲವುಂಟಾದಾಗ, ಅದರ ಅನುರಣನವು ನಮ್ಮ ಜನಸಾಮಾನ್ಯದ ಕಿವಿಗೂ ತಾಗಬಹುದು; ಅವರ ಕಣ್ಣು ಈ ಅದ್ಭುತದ ಕಡೆಗೆ ನಾಲ್ಕು ನಿಮಿಷಗಳ ಮಟ್ಟಿಗಾದರೂ ತಿರುಗಬಹುದು.

ಆಕ್ಸ್‌ಫ಼ರ್ಡ್‍ ನಿಘಂಟಿಗೆ ಮೊದಲೇ ಇಂಗ್ಲಿಷ್‍ ಭಾಷೆಯಲ್ಲಿ ಹಲವು ನಿಘಂಟುಗಳು ಹುಟ್ಟಿದ್ದುವು. ಜಾನ್‍ಸನ್‍ ಪಂಡಿತನ ಕೃತಿಯ ಹೆಸರು ಇಂದಿಗೂ ನಮ್ಮ ಕಿವಿಗೆ ಬೀಳುತ್ತಿದೆ; ಆತನು ಅದಕ್ಕೆ ಬರೆದ ಪೀಠಿಕೆ ಇಂದಿಗೂ ಇಂಗ್ಲಿಷ್‍ ಸಾಹಿತ್ಯದಲ್ಲಿ ಪ್ರಸಿದ್ಧವಾಗಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಹುಟ್ಟಿದ `ವೆಬ್‍ಸ್ಟರ್‍' ನಿಘಂಟು (Webster's Dictionary of the English Language), `ಸೆಂಚುರಿ' ನಿಘಂಟು (The Century Dictionary) ಮೊದಲಾದವುಗಳಿಗೆ ಇಂದಿಗೂ ಪ್ರಚಾರವಿದೆ. ವಿಸ್ತಾರದಲ್ಲಾಗಲಿ ಪರಿಪೂರ್ಣತೆಯಲ್ಲಾಗಲಿ ಪ್ರಯೋಗಗಳ ಸಮಗ್ರತೆಯಲ್ಲಾಗಲಿ ಪ್ರಾಮಾಣ್ಯದಲ್ಲಾಗಲಿ ಇವು ಯಾವುವೂ ಆಕ್ಸ್‌ಫ಼ರ್ಡ್‍ ನಿಘಂಟಿನ ಹತ್ತಿರಕ್ಕೆ ಕೂಡ ಬರಲಾರವು. ಈ ನಿಘಂಟಿನ ಮುಖ್ಯ ಭಾಗವು ಮುಗಿದಾಗ (೧೯೨೮ ರಲ್ಲಿ) ಅದರ ಸಂಪಾದಕವರ್ಗ ಮುದ್ರಾಪಕವರ್ಗದವರನ್ನು ಗೌರವಿಸಲು ಒಂದು ದೊಡ್ಡ ಔತಣವನ್ನು ಏರ್ಪಡಿಸಿದ್ದರು. ಆಗ ಇಂಗ್ಲೆಂಡಿನ ಪ್ರಧಾನ ಮಂತ್ರಿಗಳಾಗಿದ್ದ ಬಾಲ್ಡ್‍ವಿನ್ನರು ಭಾಷಣಮಾಡುತ್ತಾ ``ಪರಿಪೂರ್ಣತೆಯಲ್ಲಿ ಅದ್ವಿತೀಯ, ಪ್ರಾಮಾಣ್ಯದಲ್ಲಿ ಅನುಪಗಮ್ಯ'' ಎಂದು ಈ ಗ್ರಂಥವನ್ನು ಹೊಗಳಿದರು. ಪ್ರಪಂಚದ ಬೇರೆ ಯಾವ ಭಾಷೆಯಲ್ಲೂ ಇಷ್ಟು ಸಮಗ್ರವಾದ, ಉತ್ಕೃಷ್ಟವಾದ ನಿಘಂಟು ಇಲ್ಲವೆಂದು ಬಲ್ಲವರು ಹೇಳುತ್ತಾರೆ. ಮುಖ್ಯಕೃತಿಯಲ್ಲಿ ಪ್ರತಿಪಾದಿಸಿರುವ ಶಬ್ದಗಳ ಮತ್ತು ಸಮಾಸಗಳ ಒಟ್ಟು ಸಂಖ್ಯೆ ೪,೧೪,೮೨೫; ಅವುಗಳ ಪ್ರಯೋಗವನ್ನು ತೋರಿಸುವುದಕ್ಕೆ ಕೊಟ್ಟಿರುವ ಉದಾಹರಣೆಗಳು ೧೮,೨೭,೩೦೬. ಇಷ್ಟು ಸಾಮಗ್ರಿಯನ್ನು ಪುಟದ ಅಂದ ಕೆಡದಂತೆ, ಒಂದೊಂದು ಅಂಶಕ್ಕೂ ಉಚಿತವಾದ ಪ್ರಾಮುಖ್ಯ ಬರುವಂತೆ, ಆದಷ್ಟು ಕಡಿಮೆ ಜಾಗದಲ್ಲಿ ಅಡಕವಾಗುವಂತೆ, ಸಂಯೋಜಿಸಿ ಅಚ್ಚುಹಾಕಬೇಕಾದರೆ ಮುದ್ರಣಶಾಲೆಯವರು ಸುಮಾರು ಮೂವತ್ತು ಬಗೆಯ ಅಕ್ಷರದ ಅಚ್ಚುಗಳನ್ನು ಉಪಯೋಗಿಸಬೇಕಾಯಿತು. ``ಮುದ್ರಣ ಕಲೆಯನ್ನು ಕಂಡುಹಿಡಿದಂದಿನಿಂದ ಯಾವ ವಿಶ್ವವಿದ್ಯಾನಿಲಯವಾಗಲಿ, ಮುದ್ರಣಶಾಲೆಯೇ ಆಗಲಿ ಕೈಕೊಂಡಿರುವ ಉದ್ಯಮಗಳಲ್ಲಿ ಅತ್ಯಗಾಧವಾದದ್ದು.... ಈ ಭೀಮಸಾಹಸವನ್ನು ನಿರ್ವಹಿಸಿರುವುದು ಆಕ್ಸ್‌ಫ಼ರ್ಡ್‍ ವಿಶ್ವವಿದ್ಯಾನಿಲಯಕ್ಕೆ ಒಂದು ಹೆಚ್ಚಿನ ಕೀರ್ತಿಪತಾಕೆ'' ಎಂದು `ಟೈಮ್ಸ್' ಪತ್ರಿಕಾಕರ್ತರು ಹೊಗಳಿರುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.

ಈ ಮಹಾ ನಿಘಂಟಿನ ರಚನಾಕ್ರಮವನ್ನು ಕುರಿತು ಎರಡು ಮಾತುಗಳನ್ನು ಹೇಳಬಹುದು. ಮೊದಲನೆಯ ಸಂಪುಟದ ಅವತರಣಿಕೆಯಲ್ಲಿ ಹೀಗೆ ಬರೆದಿದ್ದಾರೆ: ``ಈ ನಿಘಂಟಿನ ಉದ್ದೇಶವೇನೆಂದರೆ — ಈಗ ಬಳಕೆಯಲ್ಲಿರುವ ಮತ್ತು ಕಳೆದ ಏಳುನೂರು ವರ್ಷಗಳಲ್ಲಿ ಎಂದಾದರೂ ಬಳಕೆಯಲ್ಲಿತ್ತೆಂದು ತಿಳಿದುಬಂದಿರುವ ಇಂಗ್ಲಿಷ್‍ ಶಬ್ದಗಳ ಅರ್ಥ, ಮೂಲ ಚರಿತ್ರೆಗಳನ್ನು ಪರ್ಯಾಪ್ತವಾಗುವಂತೆ ನಿರೂಪಿಸಿರುವುದು. ಇಲ್ಲಿಯ ಪ್ರಯತ್ನವೇನೆಂದರೆ – (೧) ಪ್ರತಿಯೊಂದು ಶಬ್ದದ ವಿಷಯದಲ್ಲೂ ಅದು ಎಂದು, ಹೇಗೆ, ಯಾವ ರೂಪದಲ್ಲಿ, ಯಾವ ಅರ್ಥದೊಂದಿಗೆ ಇಂಗ್ಲಿಷ್‍ ಶಬ್ದವಾಯಿತು; ಅಲ್ಲಿಂದೀಚೆಗೆ ರೂಪದಲ್ಲೂ ಅರ್ಥದಲ್ಲೂ ಅದು ಯಾವ ಯಾವ ಬೆಳವಣಿಗೆಗಳನ್ನು ಪಡೆದಿದೆ, ಅದರ ಪ್ರಯೋಗಗಳಲ್ಲಿ ಯಾವುವು ಕಾಲಕ್ರಮದಲ್ಲಿ ಲೋಪವಾಗಿವೆ (become obsolete); ಯಾವುವು ಇನ್ನೂ ನಿಂತಿವೆ; ಈಚೆಗೆ ಯಾವ ಹೊಸ ಪ್ರಯೋಗಗಳು ಯಾವ ಬಗೆಗಳಲ್ಲಿ, ಎಂದಿನಿಂದ ತಲೆಯೆತ್ತಿವೆ ಎಂಬುದನ್ನು ತೋರಿಸುವುದು, (೨) ಈ ಅಂಶಗಳಿಗೆಲ್ಲಾ ಉದಾಹರಣೆಯಾಗಿ, ನಮಗೆ ಗೊತ್ತಾಗಿರುವ ಮಟ್ಟಿಗೆ ಶಬ್ದವು ಮೊಟ್ಟಮೊದಲು ಕಾಣಿಸಿಕೊಂಡದ್ದರಿಂದ ಪ್ರಾರಂಭಿಸಿ ಕೊನೆಯ ಸಲಕ್ಕೆ ಅಥವಾ ಇಂದಿನವರೆಗೆ ಮುಟ್ಟುವಂತೆ `ಪ್ರಯೋಗ' ಪರಂಪರೆಯನ್ನು ಕೊಡುವುದು; ಹೀಗೆ ಶಬ್ದವು ತನ್ನ ಚರಿತ್ರೆಯನ್ನೂ ಅರ್ಥವನ್ನೂ ತಾನೇ ಪ್ರದರ್ಶಿಸುವಂತೆ ಮಾಡುವುದು, (೩) ಪ್ರತಿಯೊಂದು ಶಬ್ದದ ರೂಪನಿಷ್ಪತ್ತಿಯನ್ನು ಕೇವಲ ಐತಿಹಾಸಿಕಾಂಶದ ಆಧಾರದ ಮೇಲೆಯೇ, ಆಧುನಿಕ ಭಾಷಾಶಾಸ್ತ್ರದ ಪದ್ಧತಿಗಳನ್ನೂ ಸಿದ್ಧಾಂತಗಳನ್ನೂ ಅನುಸರಿಸಿಯೇ ಪ್ರತಿಪಾದಿಸುವುದು.'' — ಇದಕ್ಕಿಂತ ಸಮರ್ಪಕವಾದ ಗುರಿಯನ್ನು ಯಾವ ನಿಘಂಟುಕಾರರೂ ಇಟ್ಟುಕೊಳ್ಳಲಾರರು. A ಯಿಂದ ಹಿಡಿದು Z ವರೆಗೆ ಒಂದೇ ರೀತಿಯಲ್ಲಿ — ಮೊದಮೊದಲು ಯಾವ ಭಾಗವನ್ನೂ ಅತಿ ಹಿಗ್ಗಲಿಸಿದೆ, ಕೊನೆಕೊನೆಯಲ್ಲಿ ದೌಡಾಯಿಸಿದೆ — ಉದ್ದಕ್ಕೂ ವಿಹಿತವಾದ ಕ್ರಮದಲ್ಲಿ ಈ ಗುರಿಯನ್ನು ಸಾಧಿಸಿರುವುದು ಆಕ್ಸ್‌ಫ಼ರ್ಡ್‍ ನಿಘಂಟುಕಾರರ ಅಪೂರ್ವವಾದ ಪ್ರಶಸ್ತಿ.

ಈ ನಿಘಂಟಿನ ಕಟ್ಟಡವೆಲ್ಲ ಅನುಪಮವಾದ ``ಪ್ರಯೋಗ'' ಸಂಪತ್ತಿನ ಮೇಲೆ ನಿಂತಿದೆ. ಹದಿನೆಂಟು ಲಕ್ಷಕ್ಕೆ ಈರಿದ ಪ್ರಯೋಗಗಳನ್ನು ಗ್ರಂಥಶರೀರದಲ್ಲಿ ಕೊಟ್ಟಿದ್ದಾರೆಂದು ಕೇಳಿದ ಮಾತ್ರಕ್ಕೆ ಅವುಗಳ ಸಂಕಲನ ಕಾರ್ಯದ ಪೂರ್ಣಪ್ರಮಾಣ ನಮಗೆ ಮನದಟ್ಟಾಗುವುದಿಲ್ಲ. ಈ ನಿಘಂಟಿನ ರಚನೆಗಾಗಿ ಸಮಗ್ರ ಇಂಗ್ಲಿಷ್‍ ಸಾಹಿತ್ಯವನ್ನು ಮೊದಲಿನಿಂದ ಕೊನೆಯವರೆಗೂ ಹೊಸದಾಗಿ ಶೋಧಿಸಬೇಕಾಯಿತು. ಅಲ್ಲಿಂದ ಶಬ್ದ ಶಬ್ದಕ್ಕೂ ಅವಶ್ಯಕವಾದ ಪ್ರಯೋಗಗಳನ್ನು ಉದ್ಧರಿಸಬೇಕಾಯಿತು. ಈ ನಿಘಂಟಿನಲ್ಲಿ ಉದಾಹರಿಸಿರುವ ಮುಖ್ಯ ಗ್ರಂಥಗಳ ಪಟ್ಟಿಯೊಂದೇ ೮೮ ದೊಡ್ಡ ಪುಟಗಳನ್ನು ಆಕ್ರಮಿಸಿದೆ; ಪುಟಪುಟಕ್ಕೂ ಸುಮಾರು ೨೭೦ ಹೆಸರುಗಳಿವೆ ಎಂದು ಕೇಳಿದ ಮೇಲೆ, ಶೋಧಿಸಿದ ಒಟ್ಟು ಗ್ರಂಥಗಳ ಸಂಖ್ಯೆಯೆಷ್ಟಿರಬಹುದೋ ವಾಚಕರೇ ಊಹಿಸಿಕೊಳ್ಳಬೇಕು. ಈ ನಿಘಂಟಿಗೆ ಉಪಯೋಗಿಸಿಕೊಳ್ಳದ ಗ್ರಂಥರಾಶಿಯೇ ಇಲ್ಲ. ಕಾವ್ಯಗಳು, ನಾಟಕಗಳು, ಕಥೆ ಕಾದಂಬರಿಗಳು, ಪ್ರಬಂಧಗಳು, ಶಾಸ್ತ್ರಗ್ರಂಥಗಳು, ಕಡತಗಳು (records) ಭಾಷಣಗಳು, ಪತ್ರಿಕೆಗಳು, ವರದಿಗಳು: ಭಾಷಾಪ್ರಯೋಗಕ್ಕೆ ಎಷ್ಟು ವಿಧದ ಹಳೆಯ, ಹೊಸ ದಾಖಲೆಗಳುಂಟೋ ಅಷ್ಟು ಮೂಲೆಗಳಿಗೂ ಈ ನಿಘಂಟುಮಹಾನದಿ ನುಗ್ಗಿದೆ. ಇಷ್ಟೊಂದು ದೊಡ್ಡ ಗ್ರಂಥರಾಶಿಯನ್ನು ಶೋಧಿಸಿ ಅಲ್ಲಿಂದ ಬೇಕಾದ ಪ್ರಯೋಗಗಳನ್ನು ಎತ್ತುವುದಕ್ಕೆ ಸಂಬಳಕೊಟ್ಟು ಜನರನ್ನು ನೇಮಿಸಬೇಕಾಗಿದ್ದರೆ ಈ ನಿಘಂಟಿನ ಕಲ್ಪನೆ ಆಕಾಶದಲ್ಲೇ ಉಳಿದು ಬಿಡುತ್ತಿತ್ತು. ಕೇವಲ ಭಾಷಾಭಿಮಾನದಿಂದ ಸಾವಿರಾರು ಖಾಸಗಿ ಜನಗಳು ಮುಂದೆ ಬಂದು ಪ್ರಯೋಗಸಂಗ್ರಹ ಕಾರ್ಯಕ್ಕೆ ಸೊಂಟ ಕಟ್ಟಿ ನಿಂತದ್ದರಿಂದ ನಿಘಂಟು ಮಹಾಕಾರ್ಯವು ಮುಂದೆ ಸಾಗಿತು. ಈ ವಾಚಕ ಸೇನೆಯಲ್ಲಿ ಹಲವರು ಈ ಕೆಲಸವನ್ನು ತಮ್ಮ ಜೀವಮಾನದ ವ್ರತವನ್ನಾಗಿ ಮಾಡಿಕೊಂಡರು. ತಾವು ಕೂಡಿಸಿದ ಒಂದೊಂದು ಪ್ರಯೋಗವನ್ನೂ ಬೇರೆ ಬೇರೆ ಚೀಟಿಗಳ ಮೇಲೆ ಬರೆಯುವುದು, ನಿಘಂಟು ಕಾರ್ಯಾಲಯಕ್ಕೆ ಕಳಿಸುವುದು — ಈ ಸ್ವಸಂತೋಷದ ದುಡಿತಕ್ಕೆ ೧೮೫೮ ರಿಂದಲೇ ಪ್ರಾರಂಭವಾಯಿತು. ೧೮೮೪ ರೊಳಗಾಗಲೇ ಒಬ್ಬಿಬ್ಬರು ಇಂಥ ಒಂದೂವರೆ ಲಕ್ಷ ಚೀಟಿಗಳನ್ನು ಕಳುಹಿಸಿದ್ದರು. ಅಲ್ಲಿಂದ ಮುಂದಕ್ಕೂ ಈ ಕೆಲಸವು ಅವಿಚ್ಛಿನ್ನವಾಗಿ ನಡೆದೇ ಬಂದಿತು.

ಬೆಟ್ಟದಂತೆ ರಾಶಿ ಬೀಳುತ್ತಿದ್ದ ಈ ಪ್ರಯೋಗಗಳನ್ನು ಓದಿ, ವಿಂಗಡಿಸಿ, ವಿಭಜಿಸಿ, ಕ್ರಮವಾಗಿ ಜೋಡಿಸಿ, ಅನಾವಶ್ಯಕವಾದವನ್ನು ತೆಗೆದುಹಾಕಿ, ಬೇಕಾದವನ್ನು ಹೊಸದಾಗಿ ಸೇರಿಸಿ, ಅದರಿಂದ ಶಬ್ದದ ಚರಿತ್ರೆಯನ್ನು ಕಡೆಯುವ ಕೆಲಸವು ನಿಘಂಟಿನ ಸಂಪಾದಕವರ್ಗಕ್ಕೂ ಅವರ ಸಹಕಾರಿಗಳಿಗೂ ಬಿದ್ದಿತು. ವಾಚಕರು, ಸಹಾಯಕರು, ಉಪಸಂಪಾದಕರು, ಸಂಪಾದಕರು; ಶೋಧಿಸುವವರು, ಸಲಹೆಕೊಡುವವರು, ಪ್ರೂಫ್‍ ನೋಡುವವರು — ಹೀಗೆ ಎಷ್ಟೊಂದು ಜನದ ಕೈವಾಡ! ಒಂದು ಶಬ್ದದ ಚರಿತ್ರೆಯನ್ನು ತಪ್ಪಿಲ್ಲದಂತೆ ನಿಷ್ಕರ್ಷಿಸಲು ಎಷ್ಟು ಕಾಲ ಹಿಡಿಯಿತು, ಎಷ್ಟು ಶ್ರಮಪಡಬೇಕಾಯಿತು ಎಂಬುದು ಜನಸಾಮಾನ್ಯಕ್ಕೆ ಗೊತ್ತಾಗುವುದಿಲ್ಲ. ``set'' ಎಂಬ ಮೂರು ವರ್ಣದ ಒಂದು ಶಬ್ದದ ವ್ಯವಸ್ಥೆಗೆ ನಿಘಂಟು ಕಾರ್ಯಾಲಯದವರಿಗೆಲ್ಲಾ ಒಂಬತ್ತು ತಿಂಗಳ ಕೆಲಸ ಹಿಡಿಯಿತಂತೆ. ಹೀಗೆ ದಿನಗಳನ್ನು ನುಂಗಿದ ಪದಗಳು ಎಷ್ಟೋ! ಇಂಗ್ಲಿಷಿನಲ್ಲಿ ನೆಲಸಿರುವ ಅನ್ಯದೇಶ್ಯ ಶಬ್ದಗಳ ಅರ್ಥವನ್ನು ನಿರ್ಣಯಿಸುವುದಕ್ಕೆ ಹೊರಗಿನ ವಿದ್ವಾಂಸರಿಗೆ ಮೇಲಿಂದ ಮೇಲೆ ಕಾಗದ ಬರೆಯಬೇಕಾಗುತ್ತಿತ್ತು. ಹೊಸದಾಗಿ ಸೃಷ್ಟಿಯಾದ ಶಬ್ದಗಳು ಇನ್ನೊಂದು ಬಗೆಯ ಕಷ್ಟವನ್ನು ಕೊಡುತ್ತಿದ್ದುವು. ಎಷ್ಟೋ ವೇಳೆ ಅವುಗಳ ಜನಕರಿಗೆ ಅವನ್ನು ಹೇಗೆ ಉಚ್ಚರಿಸಬೇಕೆಂಬುದೇ ನಿರ್ಧಾರವಾಗಿರುತ್ತಿರಲಿಲ್ಲ. ``gaseous'' ಎಂಬ ಸಾಮಾನ್ಯ ಶಬ್ದವನ್ನು ಒಂದು ಸಭೆಯಲ್ಲಿ ಆರು ಜನ ದೊಡ್ಡ ಭೌತಶಾಸ್ತ್ರಜ್ಞರು ಆರು ವಿಧವಾಗಿ ಉಚ್ಚರಿಸಿದ್ದನ್ನು ಈ ನಿಘಂಟಿನ ಪ್ರಥಮ ಸಂಪಾದಕರು ಕೇಳಿದರಂತೆ! ಇದೆಲ್ಲಕ್ಕೂ ಕಠಿನವಾದದ್ದು ರೂಪನಿಷ್ಪತ್ತಿ. ಪ್ರಥಮ ಸಂಪುಟದ ಅವತರಣಿಕೆಯಲ್ಲಿ ಸಂಪಾದಕರು ಹೀಗೆ ಬರೆದಿದ್ದಾರೆ: ``ಒಂದು ಲೇಖನವು ಐದಾರು ಪಂಕ್ತಿಗಳೊಳಗೆ ಅಡಕವಾಗಿರಬಹುದು; ಆದರೂ ಅದಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಕಂಡುಹಿಡಿಯಲು ಕೆಲವು ವೇಳೆ ಎಷ್ಟು ಶ್ರಮಪಡಬೇಕಾಯಿತೆಂದು ಹೇಳಿದರೆ ಯಾರೂ ನಂಬುವುದಿಲ್ಲ; ಕೊನೆಗೆ `ರೂಪನಿಷ್ಪತ್ತಿ ಗೊತ್ತಿಲ್ಲ' ಎಂಬ ಮಾತುಗಳನ್ನು ದೃಢವಾಗಿ ಬರೆಯುವುದಕ್ಕಾದರೂ ಎಷ್ಟು ಗಂಟೆಗಳ ಶೋಧನೆಯೂ, ಇತರ ಗ್ರಂಥಗಳಲ್ಲಿ ನಿಶ್ಯಂಕೆಯಿಂದ ಹೇಳಿಬಿಟ್ಟಿರುವುದರ ಪರೀಕ್ಷೆಯೂ ಬೇಕಾಯಿತು!'' ಹೌದು. ನಿಘಂಟಿನ ಹೇಳಿಕೆ ನಮ್ಮ ಜನತೆ ಅನ್ನುವಂತೆ ``ನಿಘಂಟಾ''ಗಬೇಕಾದರೆ ಎಷ್ಟು ಕಾಲ ಎಷ್ಟು ದುಡಿದರೂ ಸಾಲದು.

ಈ ಮಹಾಕಾರ್ಯಕ್ಕೆ ಪ್ರಥಮ ಸೂತ್ರಧಾರನಾಗಿ ನಿಂತು ನಿಘಂಟು ರಚನೆಯ ವ್ಯಾಪ್ತಿ ವಿವರಗಳನ್ನು ನಿರ್ಧರಿಸಿ ಅದರ ಕೆಲಸವನ್ನು ಅರ್ಧಕ್ಕೆ ಮೀರಿ ನಡಸಿದಾತನು ಜೆ.ಎ.ಎಚ್‍.ಮರೆ (J.A.H.Murray). ಈತನನ್ನು ಮುಖ್ಯ ಸಂಪಾದಕಪದವಿಗೆ ನೇಮಿಸುವುದಕ್ಕೆ ಇಪ್ಪತ್ತು ವರ್ಷ ಮುಂಚೆಯಿಂದಲೂ ಇಂಗ್ಲಿಷ್‍ ಫಿಲಲಾಜಿಕಲ್‍ ಸೊಸೈಟಿಯ (English Philological Society) ಆಶ್ರಯದಲ್ಲಿ ಪ್ರಯೋಗಗಳ ಸಂಕಲನವು ನಡೆಯುತ್ತಿತ್ತು. ಆದರೂ ನೆಲೆಯಾಗಿ ನಿಂತು ಸಂಪಾದಕ ಕಾರ್ಯವನ್ನು ನಿರ್ವಹಿಸಿರಲಿಲ್ಲ; ಇಷ್ಟು ದೊಡ್ಡ ಗ್ರಂಥವನ್ನು ಅಚ್ಚು ಹಾಕಿಸುವ ಭಾರವನ್ನು ಹೊರಲು ಯಾವ ಸಂಸ್ಥೆಯೂ ಮುಂದೆ ಬಂದಿರಲಿಲ್ಲ. ೧೮೭೮ರ ಹೊತ್ತಿಗೆ ಈ ವಿಘ್ನಗಳೆಲ್ಲ ಪರಿಹಾರವಾದುವು. ಆಕ್ಸ್‍ಫರ್ಡ್‍ ಯೂನಿವರ್ಸಿಟಿ ಪ್ರೆಸ್ಸಿನವರು ಪ್ರಕಾಶಕರಾಗಲು ಒಪ್ಪಿದರು; ಮರೆ ಪಂಡಿತನಿಗೆ ಸಂಪಾದಕತ್ವವನ್ನು ವಹಿಸಿ, ನಿಘಂಟನ್ನು ಮುಗಿಸಲು ಹತ್ತು ವರ್ಷ ಕಾಲವನ್ನು ಕೊಟ್ಟರು. ಆ ಹತ್ತು ವರ್ಷ ಹೋಗಿ ಇಪ್ಪತ್ತಾಯಿತು, ಮೂವತ್ತಾಯಿತು; ನಿಘಂಟು ಮುಗಿಯುವ ಚಿಹ್ನೆಗಳು ಬೇರೆ ತೋರಲಿಲ್ಲ. ಇನ್ನೂ ಐದಾರು ವರ್ಷ ದಾಟಿ ೧೯೧೫ನೆಯ ಇಸವಿ ಬಂದಿತು; ಎಪ್ಪತ್ತೆಂಟು ವಯಸ್ಸಿನ ಮರೆ ತನ್ನ ಜೀವನವನ್ನೇ ಮುಗಿಸಿದನು. ನಿಘಂಟು ಮುಗಿಯುವುದಕ್ಕೆ ಇನ್ನೂ ಹದಿಮೂರು ವರ್ಷ ಬೇಕಾಯಿತು. ಆದರೂ ತಾನು ಸಾಯುವ ವೇಳೆಗೆ ಮರೆ ಒಟ್ಟು ನಿಘಂಟಿನ ಅರ್ಧಭಾಗವನ್ನು ಸ್ವಂತವಾಗಿ ಸಂಪಾದಿಸಿ ಅಚ್ಚು ಮಾಡಿಸಿದ್ದನು; ಇನ್ನೂ ಬಹುಭಾಗದ ಮೇಲುವಿಚಾರಣೆಯನ್ನು ನೋಡಿಕೊಂಡಿದ್ದನು. ಆಕ್ಸ್‍ಫರ್ಡ್‍ ನಿಘಂಟಿಗೆ `ಮರೆಯ ನಿಘಂಟು' (Murray's Dictionary) ಎಂಬ ಇನ್ನೊಂದು ಹೆಸರು ಮೊದಲಿನಿಂದಲೂ ಬಂದಿದೆ; ಈಗಲೂ ಇದೆ. ಅದು ಅನುಚಿತವಲ್ಲ.

ಮರೆ ಸಂಪಾದಕನಾದ ಕೆಲವು ದಿನಗಳಲ್ಲೇ ಬೇರೊಬ್ಬಾತನು ನಿಘಂಟಿನ ಕಾರ್ಯಾಲಯಕ್ಕೆ ಸೇರಿದನು. ಈತನೇ ಹೆನ್ರಿ ಬ್ರ್ಯಾಡ್ಲೆ (Henry Bradley). ಬ್ರ್ಯಾಡ್ಲೆ ಮನೆತನವು ವಿದ್ವತ್ತಿಗೆ ಪ್ರಸಿದ್ಧವಾದದ್ದು. ಎಫ್‍.ಎಚ್‍.ಬ್ರ್ಯಾಡ್ಲೆ ಎಂಬಾತನು ಆಧುನಿಕ ತತ್ತ್ವಜ್ಞರಲ್ಲಿ ತುಂಬ ವಿಖ್ಯಾತನಾದವನು. ಆತನ ಸಹೋದರನಾದ ಎ.ಸಿ. ಬ್ರ್ಯಾಡ್ಲೆಯ ಹೆಸರನ್ನು ಷೇಕ್‍ಸ್ಪಿಯರ್‍ ನಾಟಕ ವ್ಯಾಸಂಗಕ್ಕೆ ಕೈಹಾಕಿರುವರೆಲ್ಲರೂ ಬಲ್ಲರು. ನಮ್ಮ ಹೆನ್ರಿ ಬ್ರ್ಯಾಡ್ಲೆ ಈ ಪ್ರಖ್ಯಾತ ಸಹೋದರರಿಗೆ ಹತ್ತಿರದ ಜ್ಞಾತಿಯಾಗಬೇಕು. ಆಕ್ಸ್‍ಫರ್ಡ್‍ ನಿಘಂಟಿಗೆ ಈತನು ಗಂಟುಬಿದ್ದ ಕಥೆ ಸ್ವಾರಸ್ಯವಾಗಿದೆ. ಬ್ರ್ಯಾಡ್ಲೆ ಮೊದಲಿಗೆ ಒಳನಾಡಿನ ಯಾವುದೋ ಒಂದು ಕಾರ್ಖಾನೆಯಲ್ಲಿ ಗುಮಾಸ್ತೆಯಾಗಿದ್ದನು; ಅದರಿಂದ ಸಂಸಾರ ತೂಗದೆ, ಪತ್ರಿಕೋದ್ಯೋಗಕ್ಕೆ ಸೇರಬೇಕೆಂದು ಆತನು ೧೮೮೩ ರಲ್ಲಿ ಲಂಡನ್ನಿಗೆ ಬಂದು `ಅಕ್ಯಾಡೆಮಿ' (Academy) ಎಂಬ ಪತ್ರಿಕೆಯ ಸಂಪಾದಕನನ್ನು ನೋಡಿದನು. ಆ ವೇಳೆಗೆ ಸರಿಯಾಗಿ ಮರೆಯ ನಿಘಂಟಿನ ಮೊದಲನೆಯ ಸಂಚಿಕೆ ಹೊರಬಿದ್ದಿತ್ತು. ಅದರ ಮೇಲೆ ಒಂದು ಉದ್ದವಾದ ವಿಮರ್ಶೆಯನ್ನು ಬರೆಯುವ ಕೆಲಸವೇ ಬ್ರ್ಯಾಡ್ಲೆಗೆ ದೊರೆಯಿತು. ಈ ವಿಮರ್ಶಕನ ಪ್ರಜ್ಞೆಯನ್ನೂ ಪಾಂಡಿತ್ಯವನ್ನೂ ಕಂಡು ಮರೆಗೆ ತುಂಬ ಮೆಚ್ಚಿಗೆಯಾಗಿ, ಆತನು ಬ್ರ್ಯಾಡ್ಲೆಯನ್ನು ನಿಘಂಟಿನ ಒಳರಂಗಕ್ಕೆ ಬರುವಂತೆ ಒತ್ತಾಯಪಡಿಸಿದನು. ಬ್ರ್ಯಾಡ್ಲೆ, ಆಕ್ಸ್‍ಫರ್ಡ್‍ ನಿಘಂಟು – ಈ ಉಭಯತ್ರರ ಭಾಗ್ಯಗಳೂ ಇಲ್ಲಿ ಸಂಧಿಸಿದುವೆಂದು ಹೇಳಬಹುದು. ಬ್ರ್ಯಾಡ್ಲೆಯದು ಅಸಾಧಾರಣ ಪ್ರತಿಭೆ. ಕೆಲಸಕ್ಕೆ ಸೇರಿದ ನಾಲ್ಕೈದು ವರ್ಷಗಳಲ್ಲೇ ನಿಘಂಟಿನ ಭಾಗಗಳನ್ನು ಸ್ವತಂತ್ರವಾಗಿ ಸಂಪಾದಿಸುವ ಗೌರವವನ್ನು ಈತನಿಗೆ ವಹಿಸಿದರು. ಮರೆ ಕಾಲವಾದ ಬಳಿಕ ತಾನು ಕಾಲವಾಗುವವರೆಗೆ ಈತನೇ ಮುಖ್ಯಸಂಪಾದಕನಾದನು. ಇವರಿಬ್ಬರಲ್ಲದೆ ಡಬ್ಲ್ಯು. ಎ. ಕ್ರೇಗಿ (W. A.Craigie) ಸಿ. ಟಿ. ಆನಿಯನ್ಸ್‍ (C. T.Onions) ಎಂಬ ಇನ್ನಿಬ್ಬರು ವಿದ್ವಾಂಸರೂ ಬೇರೆ ಬೇರೆ ಕಾಲಗಳಲ್ಲಿ ಸಂಪಾದಕ ಪದವಿಗೆ ಏರಿದರು. ಈ ಕೊನೆಯವರಿಬ್ಬರ ಆಡಳಿತದಲ್ಲೇ ನಿಘಂಟು ಪೂರ್ಣಗೊಂಡದ್ದು.

ಆಕ್ಸ್‍ಫರ್ಡ್‍ ನಿಘಂಟಿನ ಶೈಶವದಲ್ಲಿ ಅದಕ್ಕೆ `ಹೊಸ ಇಂಗ್ಲಿಷ್‍ ನಿಘಂಟು' (The New English Dictionary) ಎಂದು ನಾಮಕರಣ ಮಾಡಿದ್ದರು. ಆದರೆ ಎರಡು ತಲೆಮಾರುಗಳ ಕಾಲದಲ್ಲಿ ಭಾಗಭಾಗವಾಗಿ ಹೊರಬೀಳುತ್ತಿದ್ದ ಈ ನಿಘಂಟು ``ಹೊಸದು'' ಎಂಬ ಹೆಸರಿಗೆ ಹೇಗೆ ಪಾತ್ರವಾಗುತ್ತದೆ! ಭಾಷೆಯಲ್ಲಿರುವ ಒಂದು ಶಬ್ದವನ್ನೂ ಬಿಡದೆ, ಅದರ ರೂಪ ವೈವಿಧ್ಯ ಅರ್ಥವೈಚಿತ್ರ್ಯವೆಲ್ಲವನ್ನೂ ಹಲವು ಮಂದಿ ಕಣ್ಣಿನಲ್ಲಿ ಕಣ್ಣಿಟ್ಟುಕೊಂಡು ಶೋಧಿಸಿ ಗುರುತಿಸಿರಬಹುದು. ಆದರೆ ವರ್ಣಮಾಲೆಯ ಒಂದು ಅಕ್ಷರವನ್ನು ಮುಗಿಸಿ ಸುಧಾರಿಸಿಕೊಂಡು ಮತ್ತೊಂದರ ಕಡೆಗೆ ತಿರುಗುವಷ್ಟರಲ್ಲಿಯೇ ಹಿಂದಿನ ಅಕ್ಷರದ ಸಂತತಿಯಲ್ಲಿ ನೂತನ ಶಬ್ದಶಿಶುವೊಂದು ಅವತರಿಸಿ ಈ ಪತ್ತೇದಾರರು ಮೈಕೈ ಪರಚಿಕೊಳ್ಳುವಂತೆ ಮಾಡಬಹುದು. ಇಂಗ್ಲಿಷ್‍ ಭಾಷೆ ದಿನದಿನಕ್ಕೂ ಬೆಳೆಯುತ್ತಿರುವ ಭಾಷೆ; ನಿನ್ನೆಯ ಸಂಜೆ ಇಲ್ಲದಿದ್ದ ಶಬ್ದವೋ ಪ್ರಯೋಗವೋ ಈ ದಿನ ಬೆಳಿಗ್ಗೆ ವೃತ್ತಪತ್ರಿಕೆಗಳಲ್ಲಿ ಬಂದಿರುತ್ತದೆ. ಕುಂಟುಗಾಲಿನ ನಿಘಂಟು ಇದರ ಸಮಕ್ಕೆ ಓಡುವುದು ಹೇಗೆ? ಸಿನಿಮ (cinema) ಎಂಬ ಶಬ್ದವನ್ನು – ಇಂಗ್ಲೆಂಡಿನ ಮಾತಿರಲಿ – ನಮ್ಮ ದೇಶದ ಮಕ್ಕಳೂ ಬಲ್ಲವು, ಆದರೆ ಆಕ್ಸ್‍ಫರ್ಡ್‍ ನಿಘಂಟಿನ ಮುಖ್ಯ ಶರೀರದ ಹದಿನೈದು ಸಾವಿರ ಪುಟಗಳನ್ನು ಮೊದಲಿನಿಂದ ಕೊನೆಯವರೆಗೆ ತಿರುವಿ ಹಾಕಿದರೂ ಅದು ಕಣ್ಣಿಗೆ ಬೀಳುವುದಿಲ್ಲ. Back number, birth control, broadcasting, foolproof, highbrow, lip-stick, pep, pullover, radium, waiting list – ಈ ಮೊದಲಾದ ಪದಗಳು ಇಂಗ್ಲಿಷ್‍ ಬಲ್ಲವರೆಲ್ಲರ ಬಾಯಲ್ಲೂ ಈಗ ಓಡಾಡುತ್ತಿವೆ. ಆದರೆ ಆಕ್ಸ್‍ಫರ್ಡ್‍ ನಿಘಂಟಿನ ಮುಖ್ಯಭಾಗವು ಅವನ್ನು ಅರಿಯದು. ಏಕೆಂದರೆ, ಇವೆಲ್ಲ ಬಳಕೆಗೆ ಬಂದದ್ದು ನಿಘಂಟಿನ ಆಯಾ ಸಂಪುಟವು ಪ್ರಕಟವಾದ ಈಚೆಗೆ. ಇದರ ಮೇಲೆ, ಮನುಷ್ಯನ ಕೈವಾಡ ಯಾವುದನ್ನು ತಾನೆ ತೋರಿಸಿ ಇದು ಪರಿಪೂರ್ಣ ಎಂದು ಹೇಳಬಹುದು? ಅದರಲ್ಲೂ ಇಷ್ಟು ದೊಡ್ಡ ಕೃತಿಯಲ್ಲಿ ಕೈತಪ್ಪುಗಳೂ ಪ್ರಮಾದಗಳೂ ಆಗುವ ಸಂಭವ ಇದ್ದೇ ಇರುತ್ತದೆ; ಎಷ್ಟೋ ಶಬ್ದಗಳಿಗೆ ಪ್ರಾಚೀನತರವಾದ ಪ್ರಯೋಗಗಳು ಆಗಾಗ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಈ ಲೋಪ ದೋಷಗಳನ್ನೆಲ್ಲಾ ತಿದ್ದಿ ಸರಿಪಡಿಸಿ, ಹೊಸ ಹೊಸ ಪದಗಳನ್ನು ಶೇಖರಿಸಿ ಆಕ್ಸ್‍ಫರ್ಡ್‍ ನಿಘಂಟಿಗೆ ನಿಜವಾಗಿಯೂ ಸಮಗ್ರತೆಯನ್ನು ಕೊಡಲು ಪರಿಶಿಷ್ಟವೊಂದು ಅಗತ್ಯವಾಯಿತು. ಇದರ ಆವಶ್ಯಕತೆಯನ್ನು ಮರೆ ಪಂಡಿತನೇ ಅರಿತಿದ್ದನು. ಆದ್ದರಿಂದ ಮುಖ್ಯ ಗ್ರಂಥದ ಜೊತೆಗೇ `ಪರಿಶಿಷ್ಟ'ದ ರಚನೆಯೂ ಸಾಗಿತು. ಈಗ ಐವತ್ತು ವರ್ಷಗಳಿಂದೀಚೆಗೆ ಇಂಗ್ಲಿಷ್‍ ಭಾಷೆ ಬೆಳೆದಿರುವ ರೀತಿಯನ್ನು ಈ ಪರಿಶಿಷ್ಟದಿಂದ ಚೆನ್ನಾಗಿ ಅರಿಯಬಹುದು. ಈ ಯುಗದಲ್ಲಿ ವೈಜ್ಞಾನಿಕ ಸಂಶೋಧನೆ, ಯಂತ್ರನಿರ್ಮಾಣ – ಈ ಶಾಖೆಗಳಲ್ಲೇ ಶಬ್ದಸೃಷ್ಟಿ ಬಲು ಹೆಚ್ಚು. ಮಹಾಯುದ್ಧವಂತೂ ಹಲವು ಹೊಸ ಪದಗಳನ್ನೂ ಪ್ರಯೋಗಗಳನ್ನೂ ಒದಗಿಸಿದೆ. ಹಾಗೆಯೇ ಕ್ರೀಡಾಪ್ರಪಂಚದ (The world of sport) ನುಡಿಗಳಿಗೂ ಇಲ್ಲಿ ತುಂಬ ಸ್ಥಾನವು ದೊರೆತಿದೆ. ಬೆಡಗು, ಭೋಗ ಸಾಮಗ್ರಿ, ಚಿತ್ತಕ್ಷೋಭೆ ಇವುಗಳನ್ನು ಗುರುತಿಸುವ ಹಲವು ಮಾತುಗಳು ಇಲ್ಲಿ ಮೊದಲು ತಲೆಯೆತ್ತಿವೆ. ಈ ಕನ್ನಡಿಯಲ್ಲಿ ಆಧುನಿಕ ನಾಗರಿಕತೆ ತನ್ನ ಮುಖವನ್ನು ಚೆನ್ನಾಗಿ ನೋಡಿಕೊಳ್ಳಬಹುದು**.

**ಮುಖ್ಯ ಕೃತಿಯಂತೆಯೇ ಈ `ಪರಿಶಿಷ್ಟ'ವು ಮುಗಿದಾಗಲೂ ಒಂದು ಸಂತೋಷೋತ್ಸವವು ನಡೆಯಿತು. ಆ ಸಮಾರಂಭದಲ್ಲಿ ಪ್ರೊ. ಗಾರ್ಡನ್‍ ಎಂಬವರು ಮಾಡಿದ ಭಾಷಣವು ಈ ಅಂಶವನ್ನು ಉಜ್ವ್ವಲವಾಗಿ ಚಿತ್ರಿಸುತ್ತದೆ. The Periodical ಎಂಬ ಪತ್ರಿಕೆ (March 1934) ಈ ಭಾಷಣವನ್ನೂ ಆಕ್ಸ್‍ಫರ್ಡ್‍ ನಿಘಂಟಿಗೆ ಸಂಬಂಧಿಸಿದ ಹಲವು ವಿಚಾರಗಳನ್ನೂ ಪ್ರಕಟಿಸಿದೆ. ಪ್ರಸ್ತುತಲೇಖನಕ್ಕೆ ಇದು ಮುಖ್ಯವಾದ ಆಧಾರ.

ಇಂಗ್ಲಿಷ್‍ ಶಬ್ದಶಾಸ್ತ್ರಕ್ಕೆ ಆಕ್ಸ್‍ಫರ್ಡ್‍ ನಿಘಂಟು ಪರಮಪ್ರಮಾಣವಾದರೂ ಅದರ ಉಪಯೋಗವನ್ನು ಪಡೆಯಬಲ್ಲವರು ಎಲ್ಲೋ ಕೆಲವು ಮಂದಿ. ಇದಕ್ಕೆ ಅದರ ಬೆಲೆಯೂ ಗಾತ್ರವೂ ಮುಖ್ಯಕಾರಣಗಳು. ಆದ್ದರಿಂದ ದೊಡ್ಡಗ್ರಂಥವು ಮುಗಿಯುವ ಹೊತ್ತಿಗೆ The Shorter Oxford Dictionary ಎಂಬ ಅದರ ಸಂಗ್ರಹವೊಂದು ಎರಡು ಸಂಪುಟಗಳಲ್ಲಿ ಹೊರಬಿದ್ದಿತು. ಇದರ ಬೆಲೆ ಕೂಡ ಜನಸಾಮಾನ್ಯದ ಹವಣಿಗೆ ಮೀರಿದ್ದೇ. ಭಾಷಾಪಂಡಿತರು ಹೊರತು ಮಿಕ್ಕವರ ಉಪಯೋಗಕ್ಕೆಲ್ಲಾ, ಫೌಲರ್‍ ಸಹೋದರರು (F. G.and H. W. Fowler) ಆಕ್ಸ್‍ಫರ್ಡ್‍ ನಿಘಂಟಿನ ಆಧಾರದ ಮೇಲೆ ಹಲವು ವರ್ಷಗಳಿಗೆ ಹಿಂದೆಯೇ ರಚಿಸಿದ Concise Oxford Dictionary*** ಸಾಕು. ಇದು ಕೂಡ ಭಾರವೆನ್ನುವವರಿಗೆ ಅದೇ ಸಂಗ್ರಾಹಕರ Pocket Oxford Dictionary ಇದೆ. ಇದರ ಬೆಲೆ ಕಡಿಮೆಯಾದರೂ ನಿಜವಾಗಿ ಜೇಬಿಗೆ ಹಿಡಿಸುವಷ್ಟು ಅದು ಸಣ್ಣದಲ್ಲ. ಆದ್ದರಿಂದ ಹೆಚ್ಚು ವಿಷಯ ಬಿಟ್ಟುಹೋಗದಂತೆ ಅನುಭವಸ್ಥನಾದ ಮುದ್ರಣಕಾರನೊಬ್ಬನು The Little Oxford Dictionary ಎಂಬ ಹೆಸರಿನಿಂದ ಮೂಲಮಹಾನಿಘಂಟಿನ ಕಿರಿಯ ಮರಿಯೊಂದನ್ನು ರಚಿಸಿದನು; ಈ ಕೊನೆಯದರ ಬೆಲೆ ಒಂದೇ ರೂಪಾಯಿ. ಗ್ರಾಹಕರು ತಮ್ಮ ಅಗತ್ಯವನ್ನೂ ಆಳವನ್ನೂ ನೋಡಿಕೊಂಡು ಯಾವುದನ್ನು ಬೇಕಾದರೂ ಕೊಳ್ಳಬಹುದು.

***ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್‍-ಕನ್ನಡ ನಿಘಂಟಿಗೆ ಇದೇ ತಳಹದಿ.

ಆಕ್ಸ್‍ಫರ್ಡ್‍ ಇಂಗ್ಲಿಷ್‍ ನಿಘಂಟಿನ ಮಹಾವೈಭವವನ್ನು ನೋಡಿ ನಮ್ಮ ಮನೆಗೆ ಹಿಂದಿರುಗುವಾಗ, ``ಕನ್ನಡದ ಮಾತೇನು?'' ಎಂಬ ಪ್ರಶ್ನೆ ಒಬ್ಬಿಬ್ಬರ ತಲೆಯಲ್ಲಾದರೂ ಮೂಡಬಹುದು. ``ಏನೂ ಇಲ್ಲ'' ಎಂದು ಕೈಯಾಡಿಸುವ ದೈನ್ಯಕ್ಕೆ ಗುರಿಯಾಗದಂತೆ, ಜರ್ಮನ್‍ ಮಿಷನರಿಗಳೊಬ್ಬರು ಕನ್ನಡ-ಇಂಗ್ಲಿಷ್‍ ನಿಘಂಟನ್ನು ನಮಗೆ ದಯಪಾಲಿಸಿದ್ದಾರೆ. ಇದೂ ತೂಕವಾದ ಗ್ರಂಥವೇ; ಇದರಲ್ಲಿ ೧೭೫೦ಕ್ಕೆ ಈರಿ ಪುಟಗಳಿವೆ. ಇದನ್ನು ರಚಿಸಲು ಕಿಟ್ಟೆಲ್‍ (F. Kittel) ಪಂಡಿತನಿಗೆ ಹದಿನೆಂಟು ವರ್ಷಗಳು ಹಿಡಿದುವು. ಇಂದಿಗೂ ಕನ್ನಡ ಕಾವ್ಯಗಳಲ್ಲಿ ನಡುನಡುವೆ ಅಡ್ಡಗಟ್ಟುವ ಕ್ಲಿಷ್ಟಪದಗಳಿಗೆ ಅರ್ಥತಿಳಿಯುವುದಕ್ಕೆ ಈ ನಿಘಂಟಿನ ಹಾಳೆಗಳನ್ನು ಮಗುಚುವುದೇ ಮುಖ್ಯಸಾಧನ. ಆದರೆ ಇದರಲ್ಲಿ ಎಷ್ಟೋ ಸಲ, ಅರ್ಥದ ಮಾತಿರಲಿ, ಹುಡುಕುತ್ತಿದ್ದ ಶಬ್ದವೇ ತಪ್ಪಿಸಿಕೊಳ್ಳುವ ಸಂಭವವುಂಟು. ಹಳೆಯ ಕಾವ್ಯಗಳನ್ನು ಓದುವವರಿಗೂ ಓದಿಸುವವರೆಗೂ ಇದು ದಿನಚರಿಯ ನಿರಾಶೆ. ಕಿಟ್ಟೆಲ್‍ ನಿಘಂಟಿನಿಂದ ನಮ್ಮ ಮಾನ ಉಳಿದಿರಬಹುದೇ ಹೊರತು, ಕೋರಿದ ಉಪಯೋಗಗಳೆಲ್ಲ ಸಿದ್ಧಿಸುವ ಹಾಗಿಲ್ಲ. ಇದಕ್ಕೆ ಹಲವು ಕಾರಣಗಳುಂಟು. ಈ ನಿಘಂಟನ್ನು ರಚಿಸುವ ಕಾಲಕ್ಕೆ `ಪಂಪಭಾರತ', `ಗದಾಯುದ್ಧ'ಗಳಂಥ ಪ್ರಾಚೀನ ಮಹಾಕಾವ್ಯಗಳೇ ಕಿಟ್ಟೆಲ್‍ ಪಂಡಿತನಿಗೆ ದೊರೆತಿರಲಿಲ್ಲ. ಈಗ ಅಚ್ಚಾಗಿರುವ ಹಳಗನ್ನಡದ ಇನ್ನೂ ಹಲವು ಕಾವ್ಯಗಳು ಬೆಳಕಿಗೆ ಬಂದದ್ದು ಈಚೆಗೆ. ಇದಲ್ಲದೆ ಕನ್ನಡಿಗರ ಚರಿತ್ರೆಗೂ ಭಾಷೆಗೂ ದೊಡ್ಡ ಸಾಕ್ಷಿಯಾದ ಶಾಸನಗಳ ಉಪಯೋಗವೂ ಈ ನಿಘಂಟಿನ ರಚನೆಗೆ ದೊರೆಯಲಿಲ್ಲ. ಆಧುನಿಕ ಸಾಹಿತ್ಯದಲ್ಲಂತೂ ಗಣ್ಯವಾದ ಗ್ರಂಥಗಳು ಹೊರಬೀಳುತ್ತಿರುವುದು ಕಿಟ್ಟೆಲ್‍ ಕಾಲದಿಂದ ಎಷ್ಟೋ ಈಚೆಗೆ. ಈಗ ಇಂಗ್ಲಿಷಿನಂತೆಯೇ ಕನ್ನಡದಲ್ಲಿಯೂ ಹೊಸ ಹೊಸ ಶಬ್ದಗಳು ಹುಟ್ಟುತ್ತಿವೆ; ಹೊರಗಿನಿಂದ ಭಾಷೆಗೆ ಬಂದು ಸೇರುತ್ತಿವೆ. ಈ ಸಾಮಗ್ರಿಯನ್ನೆಲ್ಲಾ ಒಳಗೊಳ್ಳದ ಒಂದು ನಿಘಂಟು ಈ ಕಾಲದಲ್ಲಿ, ಅದರಲ್ಲೂ ಆಕ್ಸ್‍ಫರ್ಡ್‍ ನಿಘಂಟಿನ ಮಹಾಜ್ಯೋತಿಯನ್ನು ನೋಡಿ ಕೋರೈಸಿಹೋದ ಕಣ್ಣುಗಳಿಗೆ, ಹೇಗೆ ತಾನೆ ತೃಪ್ತಿ ಕೊಟ್ಟೀತು!

ಆದರೆ ಭೂಮಂಡಲವನ್ನೇ ಸುತ್ತುಗಟ್ಟಿರುವ ಇಂಗ್ಲಿಷ್‍ ಭಾಷೆಯೆಲ್ಲಿ, ಹಿಂದೂದೇಶದ ದಕ್ಷಿಣದ ಮೂಲೆಯೊಂದರಲ್ಲಿ ಹುದುಗಿರುವ ಕನ್ನಡವೆಲ್ಲಿ! – ಎಂದು ಯಾರಾದರೂ ಹಾಸ್ಯಮಾಡಬಹುದು. ನಿಜ, ನಮ್ಮಲ್ಲಿ ಆ ಜನ ಸಂಪತ್ತೂ ಇಲ್ಲ, ಶಬ್ದಸಂಪತ್ತೂ ಇಲ್ಲ; ಆಕ್ಸ್‍ಫರ್ಡ್‍ ನಿಘಂಟನ್ನು ಸರಿಗಟ್ಟಬೇಕೆಂಬ ಹೆಬ್ಬಯಕೆಯೂ ಇಲ್ಲ. ಆದರೆ ನಾವು ಚಿಕ್ಕವರಾದ ಮಾತ್ರಕ್ಕೆ ತಲೆಯೆತ್ತಿ ನೋಡಲೇ ಕೂಡದೇ? ಆ ಪ್ರದೀಪದಿಂದ ನಮ್ಮದೊಂದು ಸಣ್ಣ ಹಣತೆಯನ್ನು ಹೊತ್ತಿಸಿಕೊಂಡು ನಮ್ಮ ಕುಟೀರವನ್ನು ಬೆಳಗಿಕೊಳ್ಳಕೂಡದೆ? ಪ್ರಮಾಣಭೂತವಾದ ಒಂದು ನಿಘಂಟನ್ನು ರಚಿಸುವುದು ಬಯಸಿದ ಕೂಡಲೇ ಗಗನದಲ್ಲಿ ಏರುವ ಗಾಳಿಯ ಗೋಪುರವೇನೋ ಅಲ್ಲ. ಮೊಟ್ಟಮೊದಲು ಇದರ ತಲಹದಿಯೇ ಎಷ್ಟೋ ಆಳಕ್ಕೆ ಇಳಿಯಬೇಕು; ಪ್ರಯೋಗ ಸಂಗ್ರಹ, ವ್ಯಾಸಂಗ, ಚರ್ಚೆ, ಪರಿಶೋಧನೆ – ಇದೆಷ್ಟೋ ನಡೆಯಬೇಕು. ಆದರೆ ಈ ಕಾರ್ಯಕ್ಕೆ ನೆಲವಿನ್ನೂ ಹದವಾಗಿಲ್ಲ, ಸಲಕರಣೆಗಳು ಸರಿಯಾಗಿಲ್ಲ ಎಂದು ನಾವು ಕೈಕಟ್ಟಿ ಕುಳಿತರೆ ಈ ಅನುಕೂಲತೆಯೆಲ್ಲ ಒದಗುವುದಾದರೂ ಎಂದಿಗೆ?

ಇಂಥ ನಿಘಂಟುಗಳ ರಚನೆಗೆ ನಮ್ಮ ದೇಶದಲ್ಲಿಯೂ ಉದಾಹರಣೆಗಳಿಲ್ಲದೆ ಹೋಗಿಲ್ಲ. ಮದರಾಸು ವಿಶ್ವವಿದ್ಯಾನಿಲಯದವರು ಹಣವನ್ನು ನೀರಿನಂತೆ ಸುರಿದು `ತಮಿಳು ಮಹಾಕೋಶ'ವನ್ನು (The Tamil Lexicon) ಸಿದ್ಧಪಡಿಸುತ್ತಿದ್ದಾರೆ. ಅದು ಎಷ್ಟೋ ವರ್ಷಗಳಿಂದ ಭಾಗಭಾಗವಾಗಿ ಹೊರಬೀಳುತ್ತಿದೆ. ಅತ್ತ ಸಿಂಹಳದ್ವೀಪದಲ್ಲಿ ರಾಯಲ್‍ ಏಷಿಯಾಟಿಕ್‍ ಸೊಸೈಟಿಯ ಶಾಖೆಯವರು ಸರ್ಕಾರದ ಬೆಂಬಲವನ್ನು ಪಡೆದು ಸಿಂಘಳಿ ನಿಘಂಟುವಿನ ನಿರ್ಮಾಣಕ್ಕೆ ಕೈಹಾಕಿ ಆಗಲೇ ಏಳು ವರ್ಷಗಳು ದುಡಿದಿದ್ದಾರೆಂದೂ ಮೊನ್ನೆ ತಾನೇ ಅದರ ಪ್ರಥಮ ಸಂಪುಟವನ್ನು ಹೊರಕ್ಕೆ ತಂದಿದ್ದಾರೆಂದೂ ಕೇಳುತ್ತೇವೆ. ಸರೀಕರಂತೆ ನಾವೂ ಕೆಲಸ ಮಾಡಬೇಕೆಂಬ ಹುರುಡೂ, ಆಕ್ಸ್‍ಫರ್ಡ್‍ ನಿಘಂಟಿನ ಮೇಲ್ಪಂಕ್ತಿಯೂ, ಸಾವಿರ ವರ್ಷಗಳಿಗೆ ಹಿಂದಿನಿಂದ ಅವಿಚ್ಛಿನ್ನವಾಗಿ ಬೆಳೆದುಬಂದ ಗ್ರಂಥರಾಶಿಯೂ ನಮಗಿರುವಾಗ ಕನ್ನಡ ಮಹಾನಿಘಂಟು ಎಂದಿಗೂ ಕನಸಾಗಿಯೇ ಉಳಿಯಲಾರದು. ನಮ್ಮ ಹಂಬಲು ಮೊದಲು ಹಿರಿದಾಗಲಿ; ಸಿದ್ಧಿಯೂ ಹತ್ತಿರಕ್ಕೆ ಬರುತ್ತದೆ. ``ಜೀವನ್‍ ಭದ್ರಾಣಿ ಪಶ್ಯತಿ.''

೧೯೩೪]

ಇತ್ತೀಚೆಯ ಮಾತು

ಕಾಲಚಕ್ರದ ಪರಿವರ್ತನೆಯಲ್ಲಿ ಮೇಲಿನ ಹಂಬಲಿಕೆ ಕನಸಾಗಿಯೇ ಉಳಿಯಲಿಲ್ಲ. ಸವಿಸ್ತರವಾದ ಸಪ್ರಮಾಣವಾದ `ಕನ್ನಡ ನಿಘಂಟಿ'ನ ರಚನೆಗೆ ಕನ್ನಡ ಸಾಹಿತ್ಯ ಪರಿಷತ್ತು ೧೯೪೩ ರಲ್ಲಿ ಕೈಹಾಕಿತು; ನಾಡಿನ ವಿದ್ವಾಂಸರ ಸಹಕಾರವನ್ನು ದೊರಕಿಸಿಕೊಂಡಿತು. ಈಚೆಗೆ ಮೈಸೂರು ರಾಜ್ಯದ ಸರಕಾರದ ಧನಸಹಾಯವೂ ಒದಗುತ್ತಿದೆ. ಸಾವಕಾಶವಾದರೂ ಸಾವಧಾನವಾಗಿ ನಿಘಂಟಿನ ಕೆಲಸ ಮುಂದೆ ಸಾಗುತ್ತಿದೆ. ಅದರ ರೂಪ ರಚನೆ ಹೇಗಿರುತ್ತದೆಂಬುದನ್ನು ತೋರಿಸುವ `ಮೊದಲ ಎಂಟು ಪುಟಗಳ ಕರಡುಪ್ರತಿ' ಕಳೆದ ವರ್ಷ ಹೊರಬಿದ್ದಿತು {ಈಗ ಇದರ ನಾಲ್ಕು ಸಂಪುಟಗಳು ಹೊರಬಿದ್ದಿವೆ (ಸಂ.)}... ಹೌದು, ``ಜೀವನ್‍ ಭದ್ರಾಣಿ...ಪಶ್ಯತಿ''! ಆರಂಭ ಮಂಗಳವನ್ನಂತೂ ಕಂಡೆವು; ಸಮಾಪ್ತಿ ಮಂಗಳವೂ ಆದಷ್ಟು ಬೇಗ ಸಿದ್ಧಿಸಲಿ.

೧೯೫೮]

© 2016 University of Mysore.