ಮುನ್ನುಡಿ*

*ಪರಿಷ್ಕೃತ ಇಂಗ್ಲಿಷ್‍-ಕನ್ನಡ ನಿಘಂಟಿನ ಮೊದಲನೇ ಸಂಪುಟಕ್ಕೆ ಬರೆದದ್ದನ್ನು ಸೂಕ್ತ ಮಾರ್ಪಾಟುಗಳೊಡನೆ ಇಲ್ಲಿ ಮುದ್ರಿಸಲಾಗಿದೆ.

ಮೈಸೂರು ಸರ್ಕಾರವು ಪ್ರಾರಂಭಿಸಿ ಅನಂತರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಹಿಸಿದ ಇಂಗ್ಲಿಷ್‍-ಕನ್ನಡ ನಿಘಂಟಿನ ಮೊದಲನೇ ಆವೃತ್ತಿಯು ಶ್ರೀಯುತರುಗಳಾದ ಬಿ.ವೆಂಕಟನಾರಣಪ್ಪ, ಡಾ.ಡಿ.ವಿ.ಗುಂಡಪ್ಪ, ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್‍.ವೆಂಕಣ್ಣಯ್ಯ, ಎ.ಆರ್‍.ಕೃಷ್ಣಶಾಸ್ತ್ರೀ, ಎಂ.ಆರ್‍.ಶ್ರೀನಿವಾಸಮೂರ್ತಿ ಮೊದಲಾದವರ ಹದಿನಾಲ್ಕು ವರ್ಷಗಳ ಅವಿರತ ಪರಿಶ್ರಮದ ಫಲವಾಗಿ 1946ರಲ್ಲಿ ಪ್ರಕಟವಾಯಿತು. ಅದರ ಪ್ರತಿಗಳೆಲ್ಲವೂ ಮುಗಿದುಹೋಗಿ ಅದನ್ನು ಪುನಃ ಮುದ್ರಿಸಲು ಪ್ರಸಾರಾಂಗವು 1965ರಲ್ಲಿ ವಿಶ್ವವಿದ್ಯಾನಿಲಯದ ಅನುಮತಿ ಕೋರಿದಾಗ, ಅಂದು ಕುಲಪತಿಗಳಾಗಿದ್ದ ಡಾ.ಕೆ.ಎಲ್‍.ಶ್ರೀಮಾಲಿಯವರು ಅದಕ್ಕೆ ಅನುಮತಿ ನೀಡುತ್ತಾ, ಅದನ್ನು ಪರಿಷ್ಕರಿಸಿ ಹೊಸ ಆವೃತ್ತಿಯೊಂದನ್ನು ತರಲು ಒತ್ತಾಯಪೂರ್ವಕವಾದ ಸಲಹೆ ನೀಡಿದರು. ಅದರಂತೆ ವಿಶ್ವವಿದ್ಯಾನಿಲಯದ ಪ್ರಕಟನ ಸಮಿತಿಯು ಪರಿಷ್ಕರಣದ ರೂಪುರೇಖೆಗಳನ್ನು ಸೂಚಿಸಲು ಶ್ರೀ ತೀ.ನಂ.ಶ್ರೀಕಂಠಯ್ಯನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಅದರ ಸೂಚನೆಗಳನ್ನು ಪರಿಶೀಲಿಸಿ ಸಲಹಾಮಂಡಲಿಯ ಸದಸ್ಯರ ಮತ್ತು ಸಂಪಾದಕರ ಹೆಸರುಗಳನ್ನೊಳಗೊಂಡ ನಿರ್ಣಯಪತ್ರವನ್ನು ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿಕೊಟ್ಟಿತು. ಅದರ ಪ್ರಕಾರ 1966ರ ಅಕ್ಟೋಬರಿನಲ್ಲಿ ಪರಿಷ್ಕರಣದ ಕೆಲಸ ಪ್ರಾರಂಭವಾಯಿತು. ಮೊದಲ ಕೆಲವು ವರ್ಷ ಸಲಹಾಮಂಡಲಿ ಆಗಾಗ್ಗೆ ಸಭೆ ಸೇರಿ, ಪರಿಷ್ಕರಿಸಿದ ಭಾಗಗಳನ್ನು ಪರಿಶೀಲಿಸಿ ಅವುಗಳ ಅಂತ್ಯರೂಪವನ್ನು ತೀರ್ಮಾನಿಸುತ್ತಿದ್ದಿತು. ಆದರೆ ಈ ವಿಧಾನದಿಂದ ಕಾಲ ವಿಳಂಬವಾಗುತ್ತದೆಂದು ತೋರಿಬಂದುದರಿಂದ, ಕನ್ನಡದ ಪ್ರಾದೇಶಿಕ ರೂಪಗಳನ್ನು ಪ್ರತಿನಿಧಿಸುವ ಆರು ವಿದ್ವಾಂಸರ ಸಲಹಾಮಂಡಲಿಯೊಂದನ್ನು ರಚಿಸಲಾಯಿತು. ಪರಿಷ್ಕೃತ ನಿಘಂಟಿನ ಭಾಗಗಳನ್ನು ಅಂಚೆ ಮೂಲಕ ಅವರಿಗೆ ಕಳುಹಿಸಿಕೊಟ್ಟು, ಅವರು ಮಾಡಿದ ತಿದ್ದುಪಡಿಗಳನ್ನೂ ನೀಡಿದ ಸೂಚನೆಗಳನ್ನೂ ಸಂಪಾದಕವರ್ಗವು ಪರಿಶೀಲಿಸಿ, ಪರಿಗ್ರಹಿಸಿ ಅಂತಿಮ ಸ್ವರೂಪವನ್ನು ನಿರ್ಧರಿಸಲಾಗುತ್ತಿತ್ತು. ಅಲ್ಲಿಂದ ಈ ವ್ಯವಸ್ಥೆಯನ್ನೇ ಅನುಸರಿಸಲಾಗಿದೆ. ಸಲಹಾಮಂಡಲಿಯ ಮತ್ತು ಸಂಪಾದಕವರ್ಗದ ಸದಸ್ಯರ ಹೆಸರುಗಳನ್ನು ಬೇರೆಯಾಗಿ ನೀಡಿದೆ. ನಿಘಂಟಿನ ಪರಿಷ್ಕರಣದ ಕಾರ್ಯ ಈಗ ಮುಗಿದಿದೆ.

ಪರಿಷ್ಕರಣದ ಕಾರ್ಯವನ್ನು ಪ್ರಾರಂಭಿಸಿದಾಗ ಅದನ್ನು ಮೂರು ವರ್ಷಗಳಲ್ಲಿ ಮುಗಿಸುವ ನಿರೀಕ್ಷೆಯಿದ್ದಿತು. ಇಂಥ ಯೋಜನೆಗಳು ಮೂಲತಃ ಹಾಕಿಕೊಂಡ ಅವಧಿಯೊಳಗೆ ಮುಗಿಯದಿರುವುದು ಅಪರೂಪದ ಸಂಗತಿಯೇನಲ್ಲ. ಉದಾಹರಣೆಗೆ, `ಆಕ್ಸ್‍ ಹರ್ಡ್‍ ಇಂಗ್ಲಿಷ್‍ ಡಿಕ್ಷ್‍ನರಿ'ಯನ್ನು 13 ವರ್ಷಗಳಲ್ಲಿ ಮುಗಿಸಬೇಕೆಂದು ಯೋಜನೆ ಹಾಕಿಕೊಂಡಿದ್ದರೂ ಅದನ್ನು ಸಾಧಿಸಲು 70 ವರ್ಷ ಬೇಕಾಯಿತು. ಹಲವು ಕಾರಣಗಳಿಂದಾಗಿ ನಮ್ಮ ಈ ಪರಿಷ್ಕರಣಕ್ಕೂ ದೀರ್ಘಕಾಲ ಬೇಕಾಯಿತು. ಅವುಗಳಲ್ಲಿ ಮೊದಲನೆಯದು ಮತ್ತು ಪ್ರಧಾನವಾದುದು ನಿಘಂಟಿನ ಮೂಲಭೂತ ಸ್ವರೂಪದಲ್ಲೇ ಆದ ವ್ಯತ್ಯಾಸ. ಉಪಯುಕ್ತವೆನಿಸಿದ ಹೊಸ ಪದಗಳನ್ನೂ ಅರ್ಥಗಳನ್ನೂ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕೆಂಬ ಉತ್ಸಾಹ ಸಂಪಾದಕರನ್ನು ತುಂಬಿದ್ದು ಮತ್ತೊಂದು ಕಾರಣವಾಯಿತು. ಇದರ ಫಲವಾಗಿ ಈ ನಿಘಂಟು ಹಿಂದಿನ ನಿಘಂಟಿನ ಪರಿಷ್ಕರಣವಾಗದೆ ಹೊಸ ನಿಘಂಟೇ ಆಗಿದೆ. ಇದರ ಗಾತ್ರ (ನಾಲ್ಕು ಸಂಪುಟಗಳಲ್ಲಿ) ಸುಮಾರು 6500 ಪುಟಗಳಷ್ಟಾಗುತ್ತದೆ. ಇಂಥ ಒಂದು ಬೃಹತ್ತಾದ ನಿಘಂಟು ಯಾವುದೇ ಭಾರತೀಯ ಭಾಷೆಯಲ್ಲಿ ಇದ್ದಂತಿಲ್ಲ. ಮೂರನೆಯದು, ಆದರೆ ಅಷ್ಟೇ ಮುಖ್ಯವಾದುದು, ಈ ಕಾರ್ಯಕ್ಕೆ ಅಗತ್ಯವಾದ ಪಾಂಡಿತ್ಯ ಸಾಮರ್ಥ್ಯಗಳ ಜೊತೆಗೆ ಮಾನಸಿಕ ಒಲವು ಇದ್ದು, ಪ್ರತಿ ದಿನ ನಿಗದಿಯಾದ ಕೆಲವು ಗಂಟೆಗಳ ಕಾಲ ಕುರ್ಚಿಮೇಜುಗಳಿಗೆ ಅಂಟಿಕೊಂಡು ಕೆಲಸ ಮಾಡುವ ದೈಹಿಕ ಅಭ್ಯಾಸ ಮತ್ತು ಮಾನಸಿಕ ತಾಳ್ಮೆ ಉಳ್ಳ ವ್ಯಕ್ತಿಗಳ ಕೊರತೆ. ಅಂಥವರು ಕೆಲವರು ಸಿಕ್ಕಿದಾಗಲೂ ನೇಮಕಾತಿಯ ನಿಯಮಗಳಲ್ಲಿ ಸರ್ಕಾರ ಮಾಡಿದ ಬದಲಾವಣೆಗಳು ಮತ್ತು ಇತರ ಆಡಳಿತಾತ್ಮಕ ತೊಂದರೆಗಳಿಂದಾಗಿ ಅವರ ಸೇವೆಯನ್ನು ಪಡೆಯಲಾಗಲಿಲ್ಲ. ಇದರ ಪರಿಣಾಮವಾಗಿ ಸಂಪಾದಕರ ಹುದ್ದೆಗಳು ಅನೇಕ ವರ್ಷಗಳು ಖಾಲಿ ಬಿದ್ದು, ಇಡೀ ವಿಭಾಗದಲ್ಲಿ ಒಬ್ಬರೋ ಇಬ್ಬರೋ ಕೆಲಸ ಮಾಡುವ ಪರಿಸ್ಥಿತಿ ಒದಗಿತು. ಇದರ ನಡುವೆ ಸಿದ್ಧಪಡಿಸಿದ್ದ ಕೆಲವು ಅಕ್ಷರಗಳ ಹಸ್ತಪ್ರತಿಯನ್ನು ಸಲಹಾಮಂಡಲಿಯ ಅಪೇಕ್ಷೆಯಂತೆ ಮತ್ತೆ ಪೂರ್ತಿಯಾಗಿ ಬೇರೆ ವಿಧಾನದಲ್ಲಿ ಬರೆಯಬೇಕಾಯಿತು. ಕೊನೆಯದಾಗಿ ನಿಘಂಟನ್ನು ಸಂಪುಟಗಳಾಗಿ ಪ್ರಕಟಿಸುವ ನಿರ್ಧಾರ ಕೈಗೊಂಡು ಅಚ್ಚಿಗೆ ಹಸ್ತಪ್ರತಿಯನ್ನು ಸಿದ್ಧಪಡಿಸಲು ಪ್ರಾರಂಭಿಸಿದಾಗ, ಈ ಪರಿಷ್ಕರಣಕ್ಕೆ ಆಧಾರವಾಗಿದ್ದ The Concise Oxford Dictionaryಯ ಇನ್ನೆರಡು ವರ್ಧಿತ ಪರಿಷ್ಕೃತ ಆವೃತ್ತಿಗಳು ಹೊರಬಂದವು. ನಿಘಂಟನ್ನು ಇನ್ನೂ ಆಚ್ಚಿಗೆ ಕಳುಹಿಸದೆ ಇದ್ದುದರಿಂದ, ವರ್ಧಿತ ಆವೃತ್ತಿಗಳಲ್ಲಿದ್ದ ಇತ್ತೀಚಿನ ಪದಗಳು ಮತ್ತು ಅರ್ಥಗಳನ್ನು ಸೇರಿಸುವ ಅಗತ್ಯ ಕಂಡುಬಂದಿತು. ಇದರಿಂದ ಸುಮಾರು ಶೇಕಡ ಹತ್ತರಷ್ಟು ಕೆಲಸ ಹೆಚ್ಚಿತು. ಹೀಗಾಗಿ ನಿಘಂಟಿನ ಪ್ರಕಟಣೆ ಸಾಕಷ್ಟು ತಡವಾಯಿತು. ಮುದ್ರಣಕ್ಕೆ ಸಿದ್ಧಪಡಿಸಿದ ಮೇಲೆಯೂ ಧನಾಭಾವದಿಂದಾಗಿ ಮತ್ತೆ ನಾಲ್ಕೈದು ವರ್ಷಕಾಲ ಪ್ರಕಟನೆಯ ಕೆಲಸ ನಿಂತಿತು. ಇದೀಗ ಕರ್ನಾಟಕ ಸರಕಾರದ ಉದಾರ ನೆರವಿನಿಂದಾಗಿ ನಿಘಂಟಿನ ಸಂಪುಟಗಳು ಬೆಳಕು ಕಾಣತೊಡಗಿವೆ.

ನಿಘಂಟುಕಾರ್ಯ ತುಂಬ ಸರಳವಾದ ಹಾಗೂ ಯಾಂತ್ರಿಕವಾದ ಕೆಲಸ ಎಂದು ತಪ್ಪಾಗಿ ಭಾವಿಸಲಾಗಿದೆ. ಸಂಪಾದಕರು ಇಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಎಲ್ಲವನ್ನೂ ಬಲ್ಲೆವೆಂಬ ಹಮ್ಮಿನಿಂದ ಅರ್ಥ ಬರೆಯಹೊರಟರೆ ಪ್ರಮಾಣಬದ್ಧವಾಗಿರಬೇಕಾದ ನಿಘಂಟಿನಲ್ಲಿ ತಪ್ಪುಗಳು ಸಂಭವಿಸುತ್ತವೆ. ಯಾವುದೇ ಪದಕ್ಕೆ ಅರ್ಥ ಬರೆಯುವಾಗ ನಾವು ಯಾವ ನಿಘಂಟನ್ನು ಆಧಾರವಾಗಿಟ್ಟುಕೊಂಡಿದ್ದೇವೆಯೋ ಅದರಲ್ಲಿರುವ ವಿವರಣೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ Concise Oxford Dicitonary ಯಲ್ಲಿ Alsace ಎಂಬ ಪದಕ್ಕೆ dry white wine ಎಂದು ಅರ್ಥ ಕೊಡಲಾಗಿದೆ. ಇದಕ್ಕೆ ಕನ್ನಡದಲ್ಲಿ `ಒಣ ಬಿಳಿಯ ವೈನು' ಎಂದು ಅರ್ಥ ಬರೆದರೆ ತಪ್ಪಾಗುವುದಲ್ಲದೆ ಅಸಂಬದ್ಧವೂ, ಹಾಸ್ಯಾಸ್ಪದವೂ ಆಗುತ್ತದೆ. ಇದರ ಅರ್ಥ `ಸಿಹಿಯಲ್ಲದ ಬಿಳಿಯ ವೈನು' ಎಂದು. dry ಎಂಬ ಪದಕ್ಕೆ `ಒಣ' ಎಂಬ ಅರ್ಥವಿದ್ದರೂ ಮದ್ಯಕ್ಕೆ ಸಂಬಂಧಿಸಿದಂತೆ ಅದಕ್ಕೆ `ಸಿಹಿಯಲ್ಲದ' ಎಂಬರ್ಥವೇ ಸಂಗತವಾದದ್ದು. ಅಂತೆಯೇ, ನಾವು ಆಕರವಾಗಿಟ್ಟುಕೊಂಡು ನೋಡುವ ಇಂಗ್ಲಿಷ್‍-ಇಂಗ್ಲಿಷ್‍ ನಿಘಂಟಿನಲ್ಲಿ ಕೆಲವು ವೇಳೆ (ವಿವರಣೆಯನ್ನು ಸಂಕ್ಷಿಪ್ತಗೊಳಿಸುವುದರಿಂದಲೋ, ಇಂಗ್ಲಿಷ್‍ ಭಾಷೆಯ ಜನರಿಗೆ ಸುಲಭವಾಗಿ ಅರ್ಥವಾಗುವುದೆಂಬ ಭಾವನೆಯಿಂದಲೋ) ಕೊಟ್ಟಿರುವ ವಿವರಣೆ ತಪ್ಪುಗ್ರಹಿಕೆಗೆ ಎಡೆಕೊಡುತ್ತದೆ. ಆಗ ನಿಘಂಟುಕಾರ ಆತ್ಮ ವಿಶ್ವಾಸ ತೊರೆದು ಇತರ ಬೃಹತ್‍ ನಿಘಂಟುಗಳನ್ನು ನೋಡಿ ಪದದ ಸರಿಯಾದ ಅರ್ಥವನ್ನು ನಿಷ್ಕರ್ಷಿಸಬೇಕಾಗುತ್ತದೆ. ಕೆಲವು ವೇಳೆ ಹಾಗೆ ಹಲವಾರು ನಿಘಂಟುಗಳನ್ನು ನೋಡಿದರೂ ಅರ್ಥ ಸ್ಪಷ್ಟವಾಗದಿರುವ ನಿದರ್ಶನಗಳುಂಟು! ಉದಾಹರಣೆಗೆ descale ಎಂಬ ಪದಕ್ಕೆ Concise Oxford Dictionary ಯಲ್ಲಿ remove scale from ಎಂದು ಅರ್ಥ ಕೊಟ್ಟಿದೆ. ಇದಕ್ಕೆ `ಯಾವುದರಿಂದಲೇ ಇಂಚುಪಟ್ಟಿ ಅಥವಾ ಮಾಪಕ ತೆಗೆ' ಎಂದು ಅಕ್ಷರಶಃ ಅರ್ಥ ಬರೆದರೆ ತಪ್ಪಾಗುತ್ತದೆ. ತಪ್ಪು ಎಂದು ಗೊತ್ತಾಗುವುದು ಹಲವಾರು ದೊಡ್ಡ ನಿಘಂಟುಗಳನ್ನು ನೋಡಿದ ಮೇಲೆಯೇ! ಲೋಹ ಮೊದಲಾದವುಗಳ ಮೇಲೆಯೋ, ಬಾಯ್ಲರು ಮೊದಲಾದವುಗಳ ಮೇಲೆಯೋ ಕಟ್ಟುವ ಚೆಕ್ಕೆಯನ್ನು ತೆಗೆ ಎಂಬುದು ಇದರ ಸರಿಯಾದ ಅರ್ಥ. ತನಗೆ ತಿಳಿಯದ ಅರ್ಥದಲ್ಲಿ ಅಥವಾ ತನಗೆ ತಿಳಿದಿರುವ ಅರ್ಥಗಳಲ್ಲೇ ಬೇರೊಂದು ಛಾಯೆಯಲ್ಲಿ ಒಂದು ಪದ ಏಕೆ ಬಳಕೆಯಾಗಿರಬಾರದು ಎಂಬ ಸಂಶಯ ಸದಾ ನಿಘಂಟುಕಾರನನ್ನು ಕಾಡಬೇಕು. ಆಗಲೇ ಆತ ಬೇರೆ ಮೂಲಗಳಿಂದ ಅದರ ಸರಿಯಾದ ಅರ್ಥವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ನಿಘಂಟುಕಾರ ಸದಾ ಕತ್ತೆದುಡಿಮೆಗೆ ಸಿದ್ಧವಾಗಿರಬೇಕು. ಪ್ರತಿಯೊಂದು ಪದದ, ಪದಗುಚ್ಛದ, ನುಡಿಗಟ್ಟಿನ ಅರ್ಥ ನಿಶ್ಚಯಿಸುವಾಗ ಆತ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ, ಮತ್ತು ಅದಕ್ಕೆ ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ತಡವಾಗುವುದೆಂದೋ, ಸೋಮಾರಿತನದಿಂದಲೋ ಆತ ಸರಿಯಾಗಿ ತಿಳಿದುಕೊಳ್ಳದೆ ಅರ್ಥ ಬರೆದರೆ ಪ್ರಮಾದವಾಗುವುದು ಖಂಡಿತ. ನಿಘಂಟುಕಾರನ ಇಂಥ ಕಷ್ಟಗಳನ್ನು ನೋಡಿಯೇ ಜೆ.ಜೆ.ಸ್ಕೇಲಿಗರ್‍ ಎಂಬಾತ (16-17 ನೇ ಶತಮಾನ) ಹೀಗೆಂದಿದ್ದಾನೆ: ಪರಮ ಕೊಲೆಪಾತಕಿಗಳಿಗೆ ಗಲ್ಲು ಶಿಕ್ಷೆಯನ್ನಾಗಲಿ, ಕಠಿಣ ಸಜೆಯನ್ನಾಗಲಿ ವಿಧಿಸಬಾರದು. ಅವರಿಗೆ ನಿಘಂಟು ರಚನೆಯ ಶಿಕ್ಷೆ ಕೊಟ್ಟು ಬಲಿಹಾಕಬೇಕು; ಏಕೆಂದರೆ ಈ ಕೆಲಸದಲ್ಲಿ ಎಲ್ಲ ಬಗೆಯ ಚಿತ್ರಹಿಂಸೆಗಳೂ ಅಡಗಿವೆ. ಇಷ್ಟೆಲ್ಲ ಚಿತ್ರಹಿಂಸೆಗಳನ್ನು ಅನುಭವಿಸಿದರೂ ನಿಘಂಟು ರಚನೆಕಾರರು ಟೀಕೆಗೆ ತುತ್ತಾಗುವುದಂತೂ ತಪ್ಪುವುದಿಲ್ಲ!

ಇಂಗ್ಲಿಷ್‍ ಭಾಷೆಯ ವರ್ತುಲಕ್ಕೆ ಸ್ಫುಟವಾದ ಕೇಂದ್ರಬಿಂದುವೊಂದು ಇದೆಯೇ ಹೊರತು ಸ್ಪಷ್ಟವಾದ ಪರಿಧಿಯಿಲ್ಲ ಎಂಬ ಮಾತು ಇಂಗ್ಲಿಷ್‍ ಭಾಷೆಯ ಎಲ್ಲೆ ಮೀರಿದ ಬೆಳವಣಿಗೆಯನ್ನು ತಿಳಿಸುತ್ತದೆ. 1928ರಲ್ಲಿ ಸಮಾಪ್ತಿಗೊಂಡ ಬೃಹತ್‍ ಆಕ್ಸ್‍ಫ ರ್ಡ್‍ ಇಂಗ್ಲಿಷ್‍ ಡಿಕ್ಷನರಿಯಲ್ಲಿ ಸುಮಾರು ಐದು ಲಕ್ಷ ಪದಗಳಿಗೆ ಅರ್ಥ ಕೊಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಇಂಗ್ಲಿಷ್‍ ಭಾಷೆಗೆ ಸುಮಾರು ಎಪ್ಪತ್ತು ಸಾವಿರ ಪದಗಳು ಸೇರಿವೆಯೆಂದು ಆಕ್ಸ್‍ಫ ರ್ಡ್‍ ನಿಘಂಟಿನ ಅನುಬಂಧ ಸಂಪುಟಗಳು ತಿಳಿಸುತ್ತವೆ. ಅಂದರೆ ವರ್ಷಕ್ಕೆ ಸರಾಸರಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಪದಗಳು ಇಂಗ್ಲಿಷ್‍ ಭಾಷೆಗೆ ಸೇರಿ ಅದು ಶ್ರೀಮಂತವಾಗುತ್ತಿದೆ. ಇದರಲ್ಲಿ ಸಾಮಾನ್ಯ ಪದಗಳು, ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳು, ಅಶಿಷ್ಟ ಪದಗಳು ಎಲ್ಲವೂ ಇವೆ. ಜೊತೆಗೆ ಹಿಂದಿನ ಎಷ್ಟೋ ಪದಗಳೂ ಅವುಗಳ ಅರ್ಥಗಳೂ ಬಳಕೆ ತಪ್ಪಿವೆ; ಮತ್ತೆ ಕೆಲವು ಪದಗಳಿಗೆ ಹೊಸ ಹೊಸ ಛಾಯೆಗಳು ಹುಟ್ಟಿಕೊಂಡಿವೆ. ಇಂಥ ಬೆಳವಣಿಗೆಗಳನ್ನೂ ಬದಲಾವಣೆಗಳನ್ನೂ ಸಂಕ್ಷಿಪ್ತ ರೀತಿಯಲ್ಲಿ ಅಳವಡಿಸಿಕೊಂಡು 1982ರಲ್ಲಿ ಪ್ರಕಟವಾದ, ಇಂಗ್ಲಿಷ್‍ ಭಾಷೆಯಲ್ಲಿ ಅತ್ಯಂತ ಪ್ರಮಾಣಬದ್ಧವೆಂದು ಪರಿಗಣಿಸಿರುವ The Concise Oxford Dictionaryಯ ಏಳನೆಯ ಆವೃತ್ತಿ ನಮ್ಮ ಈ ಪರಿಷ್ಕೃತ ನಿಘಂಟಿಗೆ ಮುಖ್ಯ ಆಧಾರ. ಆದರೆ ಪ್ರಸಕ್ತ ಇಂಗ್ಲಿಷ್‍-ಕನ್ನಡ ನಿಘಂಟು ಈ ನಿಘಂಟಿನ ಅನುವಾದವಲ್ಲ. ಪದ, ಅರ್ಥ, ಚಿತ್ರ, ದಾಖಲೆ, ಉದಾಹರಣವಾಕ್ಯ, ಮೊದಲಾದ ಅಂಶಗಳಲ್ಲಿ ಕನ್ಸೈಸ್‍ ಆಕ್ಸ್‍ಫ ರ್ಡ್‍ ನಿಘಂಟಿನ ಜೊತೆಗೆ The Random House Dictionary of the English Language, Webster's Third New International Dictionary, The Oxford Advanced Learner's Dictionary of Current English, Chambers 20th Century Dictionary, Funk and Wagnalls Standard Dictionary, Oxford English Dictionary ಮತ್ತು ಅದರ ಅನುಬಂಧ ಸಂಪುಟಗಳ ನೆರವನ್ನು ಪಡೆಯಲಾಗಿದೆ. ಪಾರಿಭಾಷಿಕ ಪದಗಳ ವಿಷಯದಲ್ಲಿ ಇವುಗಳ ಜೊತೆಗೆ ಚೇಂಬರ್ಸ್‍ ಸಂಸ್ಥೆಯ Dictionary of Science and Technology, Hackh's Chemical Dictionary, Dorland's Medical Dictionary, Stedman's Medical Dictionary, ಆಕ್ಸ್‍ಫ ರ್ಡ್‍ ಸಂಸ್ಥೆಯ Concise Science Dictionary, ಮತ್ತು ಪೆಂಗ್ವಿನ್‍ ಸಂಸ್ಥೆ ಮೊದಲಾದವರು ಪ್ರಕಟಿಸಿರುವ ಹಲವಾರು ತಾಂತ್ರಿಕ ಕೋಶಗಳ ನೆರವನ್ನು ಪಡೆದಿದೆ. ಇಂಗ್ಲಿಷ್‍ ಪದಗಳ ಆಯ್ಕೆಗೆ ಕನ್ಸೈಸ್‍ ಆಕ್ಸ್‍ಫ ರ್ಡ್‍ ನಿಘಂಟು ನಮಗೆ ಮುಖ್ಯ ಆಧಾರವಾಗಿರುವಂತೆ ಅವುಗಳ ಸಂವಾದಿಯಾದ ಕನ್ನಡ ಪದಗಳಿಗೆ 1946ರ ನಮ್ಮ ಇಂಗ್ಲಿಷ್‍-ಕನ್ನಡ ನಿಘಂಟು ನಮಗೆ ಮುಖ್ಯ ಆಧಾರ.

ಇಂಗ್ಲಿಷ್‍-ಕನ್ನಡ ನಿಘಂಟಿನ ನಾಲ್ಕು ಸಂಪುಟಗಳ ಈ ಪರಿಷ್ಕೃತ ಆವೃತ್ತಿಯ ವೈಶಿಷ್ಟ್ಯಗಳು ಹೀಗಿವೆ:

    1. ಪದಗಳು: (ಅ) ಸಂಖ್ಯೆ: ಹಿಂದಿನ ಆವೃತ್ತಿಯಲ್ಲಿ ``A'' ಇಂದ ``D'' ವರೆಗಿನ ಮೊದಲನೇ ಸಂಪುಟದ ಅಕ್ಷರಗಳಲ್ಲಿನ ಇಂಗ್ಲಿಷ್‍ ಪದಗಳ ಒಟ್ಟು ಸಂಖ್ಯೆ 15,122. ಅವುಗಳಲ್ಲಿ 10,659ಕ್ಕೆ ಮಾತ್ರ ಅರ್ಥ ನೀಡಲಾಗಿದ್ದು 4123 ಪದಗಳನ್ನು ಕೇವಲ ದಾಖಲೆ ಮಾಡಿ ಕೈಬಿಟ್ಟಿದೆ. ಆದರೆ ಸದ್ಯದ ಆವೃತ್ತಿಯಲ್ಲಿ ಅದೇ ನಾಲ್ಕು ಅಕ್ಷರಗಳಲ್ಲಿನ ಇಂಗ್ಲಿಷ್‍ ಪದಗಳ ಒಟ್ಟು ಸಂಖ್ಯೆ 29,156. ಎಲ್ಲ ಪದಗಳನ್ನೂ ಪ್ರಧಾನ ಉಲ್ಲೇಖಗಳಾಗಿ ಕೊಟ್ಟು ಅವುಗಳಿಗೆ ಅರ್ಥ ಕೊಡಲಾಗಿದೆ. E ಇಂದ L ವರೆಗಿನ ಎರಡನೇ ಸಂಪುಟದಲ್ಲಿ ಸುಮಾರು 24519 ಪದಗಳಿಗೆ ಅರ್ಥ ನೀಡಲಾಗಿದ್ದು ಸುಮಾರು 2014 ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳಿಗೆ ಅರ್ಥ ನೀಡಲಾಗಿದೆ. 321 ಚಿತ್ರಗಳಿವೆ. M ಇಂದ R ವರೆಗಿನ 3ನೇ ಸಂಪುಟದಲ್ಲಿ 26,350 ಇಂಗ್ಲಿಷ್‍ ಪದಗಳಿಗೆ ಅರ್ಥ ನೀಡಲಾಗಿದೆ; ಸುಮಾರು 1470 ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳಿಗೆ ಅರ್ಥ ನೀಡಿ, 293 ಚಿತ್ರಗಳನ್ನು ನೀಡಲಾಗಿದೆ. S ಇಂದ Z ವರೆಗಿನ 4ನೇ ಸಂಪುಟದಲ್ಲಿ 26077 ಇಂಗ್ಲಿಷ್‍ ಪದಗಳಿಗೆ ಅರ್ಥವಿವರಣೆ ನೀಡಿ, 3452 ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳಿಗೆ ಅರ್ಥ ನೀಡಲಾಗಿದೆ; ಮತ್ತು 315 ಚಿತ್ರಗಳನ್ನು ನೀಡಲಾಗಿದೆ.
    2. ದಾಖಲೆ:(ಅ) ನಾಮಪದ, ಕ್ರಿಯಾಪದ, ಮೊದಲಾದ ಪದಜಾತಿಗಳನ್ನೂ ಅವುಗಳಿಂದ ವ್ಯುತ್ಪನ್ನವಾದ ಪದಗಳನ್ನೂ ಪ್ರಧಾನ ಪದಗಳಾಗಿ ನಮೂದಿಸಿದೆ.

      (ಆ) ಪದ, ನಂತರ ಅದರ ಉಚ್ಚಾರಣೆ, (ಗುಣವಾಚಕ, ನಾಮಪದ ಮೊದಲಾದ) ವಾಚಕ ಸೂಚನೆ, ವಿದೇಶೀಯ ಪದವಾದರೆ ಅದರ ಮೂಲ (ಉದಾಹರಣೆಗೆ ಲ್ಯಾಟಿನ್‍ದಾದರೆ L), ಆಮೇಲೆ ಅರ್ಥಗಳು, ಅನಂತರ ಆ ಪದಕ್ಕೆ ಸಂಬಂಧಿಸಿದ ಪದಗುಚ್ಛಗಳು ಮತ್ತು ನುಡಿಗಟ್ಟುಗಳು — ಈ ಕ್ರಮವನ್ನು ಅನುಸರಿಸಲಾಗಿದೆ.

      (ಇ) ಏಕಪದದಂತೆ ಪ್ರಯೋಗವಾಗುವ ಅರೆ-ಸಮಸ್ತಪದಗಳನ್ನೂ, ಅಸಮಸ್ತ ಪದಪುಂಜಗಳನ್ನೂ ಸ್ವತಂತ್ರ ಪದಗಳನ್ನಾಗಿ ಪರಿಗಣಿಸಿ ನಮೂದಿಸಿದೆ: air-minded; back up; cock-and-bull story; dry law.

      (ಈ) ಕ್ರಿಯಾಪದಗಳ ಸಕರ್ಮಕ ಮತ್ತು ಅಕರ್ಮಕ ಪ್ರಯೋಗಗಳನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ದಾಖಲೆ ಮಾಡಿ ಅರ್ಥ ಕೊಟ್ಟಿದೆ. ಒಂದೇ ವಿವರಣೆ ಎರಡಕ್ಕೂ ಅನ್ವಯಿಸಿದರೆ ಕಂಸಗಳಲ್ಲಿ ಅಕ್ರಿ. ಸಹ ಅಥವಾ ಸಕ್ರಿ. ಸಹ ಎಂದು ಕೊಟ್ಟಿದೆ.

      (ಉ) ಪದಗುಚ್ಛಗಳನ್ನು (phrases) ಮತ್ತು ನುಡಿಗಟ್ಟುಗಳನ್ನು (idioms) ಪದದ ಅರ್ಥಗಳನ್ನು ನೀಡಿದ ತರುವಾಯ ಪ್ರತ್ಯೇಕವಾಗಿ ಕೊಟ್ಟಿದೆ. ಇವುಗಳಿಗೂ ಪ್ರಯೋಗಗಳನ್ನು ಕೊಡಲಾಗಿದೆ. ಗಾದೆಗಳನ್ನು ನುಡಿಗಟ್ಟುಗಳಲ್ಲೇ ಸೇರಿಸಿದೆ.

      (ಊ) ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉದಾಹರಣೆ ಮತ್ತು ಪ್ರಯೋಗವಾಕ್ಯಗಳನ್ನು ಕನ್ನಡ ಅನುವಾದ ಸಹಿತವಾಗಿ ನೀಡಲಾಗಿದೆ.

      (ಋ) ಒಂದೇ ಅರ್ಥಕ್ಕೋ ಪದಗುಚ್ಛಕ್ಕೋ ಎರಡು ಮೂರು ಪ್ರಯೋಗವಾಕ್ಯಗಳನ್ನು ಕೊಡುವಾಗ ಒಂದರ ಕನ್ನಡ ಅರ್ಥ ಕೊಟ್ಟ ನಂತರ ಪೂರ್ಣ ವಿರಾಮ ಬಳಸಿ ಅನಂತರ ಇನ್ನೊಂದು ಪ್ರಯೋಗವಾಕ್ಯ ಕೊಡಲಾಗಿದೆ.

  1. ಅರ್ಥ: (ಅ) ದಾಖಲೆ ಮಾಡಿರುವ ಎಲ್ಲ ಪದಗಳಿಗೂ ಅರ್ಥ ಕೊಟ್ಟಿದೆ.

    (ಆ) ಅರ್ಥವ್ಯತ್ಯಾಸಗಳನ್ನು ಸಂಖ್ಯೆ ಹಾಕಿ ತೋರಿಸಿದೆ.

    (ಇ) ಒಂದೇ ಅರ್ಥದಲ್ಲಿ ಪರ್ಯಾಯವಾಗಿ ಕೊಡುವ ಭಿನ್ನ ಭಿನ್ನ ಪದಗಳ ನಡುವಣ ವಿಭಾಗವನ್ನು ಆರೆಕೋಲನ್‍ (;) ಮೂಲಕ ಸೂಚಿಸಿದೆ. ಉದಾಹರಣೆಗೆ alert ಹುಷಾರಿ; ಎಚ್ಚರಿಕೆ; ಅಪಾಯಸೂಚಕ ಧ್ವನಿ.

    (ಈ) ಸಾಧ್ಯವಾದಮಟ್ಟಿಗೂ ಇಂಗ್ಲಿಷ್‍ ಪದಕ್ಕೆ ಸಂವಾದಿಯಾದ ಕನ್ನಡ ಅರ್ಥವನ್ನು ಏಕಪದದಲ್ಲಿ ಕೊಟ್ಟು ಅನಂತರ ವಿವರಣೆ ನೀಡಿದೆ.

    (ಉ) ಮೊದಲನೇ ಆವೃತ್ತಿಯಲ್ಲಿ ಕೊಟ್ಟಿರುವ ಸಮಾನಾರ್ಥಕ ಪದಗಳನ್ನು ಆದಷ್ಟೂ ಕಡೆ ಉಳಿಸಿಕೊಂಡು ಜೊತೆಗೆ ಇತರ ಅನೇಕ ಪದಗಳನ್ನು ಸೇರಿಸಿದೆ.

    (ಊ) ಸಮಾನಾರ್ಥಕ ಪದಗಳ ಅರ್ಥವಿವರಣೆಯ ನಂತರ ಕೋಲನ್‍ ಹಾಕಿ ಪ್ರಯೋಗವಾಕ್ಯಗಳನ್ನು ಕೊಡಲಾಗಿದೆ. ಪದದ ಅರ್ಥದ ವಿವಿಧ ಛಾಯೆಗಳನ್ನು ನಿದರ್ಶನಸಹಿತವಾಗಿ ವಿಶದಪಡಿಸುವ ಪ್ರಯೋಗಗಳು ಇಲ್ಲಿ ಹಿಂದಿನ ಆವೃತ್ತಿಯಲ್ಲಿದ್ದುದಕ್ಕಿಂತ ವಿಪುಲವಾಗಿವೆ. ಪದದ ವಿವಿಧ ಅರ್ಥಗಳಲ್ಲಿ ಪ್ರಸಿದ್ಧವಲ್ಲದ ಅರ್ಥಗಳನ್ನೂ, ಕೂಡಲೆ ಸ್ಪಷ್ಟವಾಗದಿರುವ ಅರ್ಥಗಳನ್ನೂ, ಸೂಕ್ಷ್ಮ ವ್ಯತ್ಯಾಸವಿರುವ ಅರ್ಥಗಳನ್ನೂ ವಿಶದಪಡಿಸುವುದು ಇದರ ಉದ್ದೇಶ.

  2. ಪದಸೃಷ್ಟಿ: ನಿಘಂಟಿನ ಕೆಲಸ ಪದವೊಂದರ ಅರ್ಥವನ್ನು ತಿಳಿಸುವುದು. ಪದ ಮತ್ತು ಅರ್ಥವಿವರಣೆ ಒಂದೇ ಭಾಷೆಯದಾಗಿದ್ದರೆ ಈ ಕೆಲಸ ಸುಲಭವಾಗಿರುತ್ತದೆ. ಆದರೆ ಅವೆರಡರಲ್ಲಿ ಯಾವುದೇ ಒಂದು ಇತರ ಭಾಷೆಯದ್ದಾಗಿದ್ದರೆ ಸಮಸ್ಯೆ ತಲೆದೋರುತ್ತದೆ. ಅದರಲ್ಲೂ ಆ ಭಾಷೆ ಭಿನ್ನ ಸಂಸ್ಕೃತಿಗೆ ಸೇರಿದ್ದರಂತೂ ಸಮಸ್ಯೆ ಜಟಿಲವೂ, ಗಂಭೀರವೂ ಆಗುತ್ತದೆ. ಇಂಗ್ಲಿಷ್‍ ಮತ್ತು ಕನ್ನಡಗಳ ಸಂಬಂಧ ಈ ಬಗೆಯದು. ಈ ಸಮಸ್ಯೆ ಕನ್ನಡಕ್ಕೆ — ಇದು ಇತರ ಭಾಷೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ — ಅಪರಿಚಿತವಾದ, ಆಧುನಿಕ ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳಿಗೂ ಮಾತ್ರ ಸೀಮಿತವಾಗಿಲ್ಲ; ಅರ್ಥಶಾಸ್ತ್ರ, ಸಮಾಜಶಾಸ್ತ್ರ, ತತ್ತ್ವಶಾಸ್ತ್ರ ಮುಂತಾದ ಮಾನವಿಕ ವಿಭಾಗಗಳಿಗೂ ಅನ್ವಯಿಸುತ್ತದೆ. ಭೌಗೋಳಿಕವಾಗಿ, ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಟ ಪರಿಸರವೊಂದರಲ್ಲಿ ಹುಟ್ಟಿದ ಪ್ರಕಲ್ಪನೆಗಳನ್ನು ಅಭಿವ್ಯಕ್ತಿಸುವ ಪದಗಳ ಅರ್ಥಗಳನ್ನು ಭಿನ್ನವಾದ ಪರಿಸರದಲ್ಲಿ ಹುಟ್ಟಿದ ಭಾಷೆಯ ಮೂಲಕ ವಿವರಿಸುವಾಗ ಆ ಭಾಷೆಯ ಪದಗಳು ಸಾಕಾಗದೆ ಹೊಸ ಪದಗಳನ್ನು ಸೃಷ್ಟಿಸುವ ಅಗತ್ಯ ಎದುರಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ಪಾರಿಭಾಷಿಕ ಶಬ್ದಗಳ ಸೃಷ್ಟಿಯಲ್ಲಿ ಮಾತ್ರವಲ್ಲದೆ ಸಾಮಾನ್ಯ ಪದಗಳ ಸೃಷ್ಟಿಯಲ್ಲಿಯೂ ಉದಿಸಬಹುದು. ಹೀಗೆ ಸೃಷ್ಟಿಸುವಾಗ ಈ ನಿಘಂಟಿನಲ್ಲಿ ಸಾಮಾನ್ಯವಾಗಿ ಅನುಸರಿಸಿರುವ ರೀತಿ ಹೀಗಿದೆ:

    (ಅ) ಸಾಧ್ಯವಾದೆಡೆ ಕನ್ನಡ ಮತ್ತು ಸಂಸ್ಕೃತ ಪದಗಳಿಂದ ಹೊಸ ಪದಗಳನ್ನು ರಚಿಸಿದೆ: belle (of town) ಊರಚೆಲುವೆ; dextral ಬಲಚ; diarrhoea ವದನಾತಿಸಾರ; diurnal ದಿವಾಚರ.

    (ಆ) ಇಂಗ್ಲಿಷ್‍ ಪದವೇ ಉತ್ತಮ, ಸುಲಭ ಅಥವಾ ರೂಢಿಗೆ ಬಂದಿದೆ ಎಂದು ತೋರಿದಾಗ ಅದನ್ನು ಕನ್ನಡದ ಪದವಾಗಿ ಬಳಸಲು ಅನುಕೂಲವಾದ ರೂಪದಲ್ಲಿ ಕನ್ನಡದಲ್ಲಿ ಲಿಪ್ಯಂತರಿಸಲಾಗಿದೆ: bat (ನಾಮಪದ) ಬ್ಯಾಟು, (ಕ್ರಿಯಾಪದ) ಬ್ಯಾಟುಮಾಡು; bowl ಬೋಲ್‍ ಮಾಡು; carbon ಕಾರ್ಬನ್ನು; carbonaceous ಕಾರ್ಬನೀಯ; carbonate ಕಾರ್ಬನೇಟು; carbonization ಕಾರ್ಬನೀಕರಣ; chrome ಕ್ರೋಮಿಸು.

    (ಇ) ಅಗತ್ಯವಾದೆಡೆ ಕನ್ನಡ-ಇಂಗ್ಲಿಷ್‍, ಕನ್ನಡ-ಸಂಸ್ಕೃತ-ಇಂಗ್ಲಿಷ್‍ ಸಮಾಸಪದಗಳನ್ನು ರಚಿಸಿದೆ: batsman ಬ್ಯಾಟುಗಾರ; deionizer ಅಯಾನುಗಳೆಕ; agrologist ಮಣ್ಣುತಜ್ಞ; creditor ಸಾಲದಾತ; debtor ಸಾಲಗ್ರಾಹಿ; deionization ನಿರಯಾನೀಕರಣ.

    (ಈ) ಪಾರಿಭಾಷಿಕ ಶಬ್ದರಚನೆಯಲ್ಲಿ ಕರ್ನಾಟಕದ ಶಾಲಾಕಾಲೇಜುಗಳಲ್ಲಿ ಬಳಕೆಯಲ್ಲಿರುವ ಪಠ್ಯಪುಸ್ತಕಗಳು, ಮೈಸೂರು ಮೊದಲಾದ ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳು ಪ್ರಕಟಿಸಿರುವ ಗ್ರಂಥಗಳು ಮತ್ತು ವಿಷಯಕೋಶಗಳು, ಆಡಳಿತ ಪದಕೋಶ, ಕಛೇರಿ ಕೈಪಿಡಿ, ಡಾ.ಡಿ.ಎಸ್‍.ಶಿವಪ್ಪನವರ `ವೈದ್ಯ ಪದಕೋಶ', ಎಸ್‍.ಜಿ.ನರಸಿಂಹಾಚಾರ್ಯರ Latin and Kannada Names of Indigenous and Medicinal Plants of Mysore 1952, ಡಾ.ರಘುವೀರರ Comprehensive English-Hindi Dictionary, ಭಾರತ ಸರ್ಕಾರದ A Consolidated Glossary of Technical Terms, ಭಾರತ ಸರ್ಕಾರ ಪ್ರಕಟಿಸಿರುವ Legal Glossary (ವಿಧಿ ಶಬ್ದಾವಲೀ), ಕರ್ನಾಟಕ ಸರ್ಕಾರದ `ಕಾನೂನು ಪದಕೋಶ' ಮೊದಲಾದವುಗಳ ನೆರವನ್ನು ಪಡೆದಿದೆ.

    ಈ ಪದಸೃಷ್ಟಿಯು ಪ್ರಯೋಗಾತ್ಮಕ, ಸಲಹಾತ್ಮಕ ಎನ್ನುವುದನ್ನು ಮರೆಯಬಾರದು; ಅದರ ಉಪಯುಕ್ತತೆ ಮತ್ತು ಸಾರ್ಥಕ್ಯ ಅದನ್ನು ಬಳಸುವವರನ್ನು ಅವಲಂಬಿಸಿದೆ. ಈ ಸೃಷ್ಟಿ ವಿಶ್ವಾಮಿತ್ರ ಸೃಷ್ಟಿಯಾಗಿಯೂ ಕಂಡುಬರಬಹುದು. ಇಂದು ಸಾಮಾನ್ಯವಾಗಿಬಿಟ್ಟಿರುವ ಕೆಲವು ಪದಗಳು ಮೊದಲು ಪ್ರಯುಕ್ತವಾದಾಗ ಅಂದಿನ ವಿದ್ವಾಂಸರಿಗೆ ವಿಕಟವಾಗಿ ಕಂಡುಬಂದಿತ್ತೆನ್ನುವುದು ಐತಿಹಾಸಿಕ ಸತ್ಯ. ಭಾಷೆಯ ವಿಷಯದಲ್ಲಿ ಅಷ್ಟು ಸಂಪ್ರದಾಯವಾದಿಯಾಗಿರದಿದ್ದ ಡಾಕ್ಟರ್‍ ಜಾನ್‍ಸನ್‍ 1772 ರಲ್ಲಿ ಪ್ರಕಟಿಸಿದ ತನ್ನ ನಿಘಂಟಿನಲ್ಲಿ civilization ಎಂಬ ಪದಕ್ಕೆ, ಬಾಸ್ವೆಲನ ಸಲಹೆಯನ್ನೂ ಕಿವಿಗೆ ಹಾಕಿಕೊಳ್ಳದೆ, ಅವಕಾಶ ನೀಡಲಿಲ್ಲ ಎನ್ನುವುದನ್ನು ನೆನೆಯಬಹುದು.

  3. ಉಚ್ಚಾರಣೆ: ಈ ನಿಘಂಟಿನಲ್ಲಿ ಇಂಗ್ಲಿಷ್‍ ಪದಗಳ ಉಚ್ಚಾರಣೆಗೆ ಆಧಾರ ಮೂಲತಃ ಡೇನಿಯಲ್‍ ಜೋನ್ಸ್‍ನಿಂದ ಸಂಗ್ರಹಿಸಲ್ಪಟ್ಟು ಎ.ಸಿ.ಗಿಮ್‍ಸನ್‍ನ ಪರಿಷ್ಕರಣ ಮತ್ತು ತಿದ್ದುಪಡಿಗಳಿಂದ ಕೂಡಿದ Everyman's English Pronouncing Dictionary (14ನೇ ಆವೃತ್ತಿಯ 1981ರ ಮುದ್ರಣ), ಮತ್ತು The Concise Oxford Dictionary (7ನೇ ಆವೃತ್ತಿ)ಗಳು. ಇಂಗ್ಲಿಷ್‍ ಪದಗಳಿಗೆ ಈ ನಿಘಂಟುಗಳಲ್ಲಿರುವ `ಸ್ಸ್ಟ್ಯಾಂಡರ್ಡ್' ಉಚ್ಚಾರಣೆಯನ್ನು ಕೊಟ್ಟಿದೆ. ಆದರೆ ವಿವರಣೆಯಲ್ಲಿ ಕನ್ನಡದಲ್ಲಿ ಬಳಕೆಯಲ್ಲಿರುವ ಉಚ್ಚಾರಣೆಯ ರೂಪವನ್ನು ಇಟ್ಟುಕೊಂಡಿದೆ. ಉದಾಹರಣೆಗೆ budget, badge ಎಂಬ ಪದಗಳಿಗೆ ಬಜಿಟ್‍, ಬ್ಯಾಜ್‍ ಎಂಬ ಉಚ್ಚಾರಣೆ ಕೊಟ್ಟು ವಿವರಣೆಯಲ್ಲಿ ಬಡ್ಜಟ್ಟು, ಬ್ಯಾಡ್ಜು ಎಂಬ ಕನ್ನಡ ರೂಪಗಳನ್ನು ಇಟ್ಟುಕೊಂಡಿದೆ. ಹಾಗೆಯೇ dharma ಎಂಬ ಪದಕ್ಕೆ ಡಾರ್ಮ, ಡರ್ಮ ಎಂಬ ಇಂಗ್ಲಿಷ್‍ ಉಚ್ಚಾರಣಾರೂಪಗಳನ್ನು ಕೊಟ್ಟು, ವಿವರಣೆಯಲ್ಲಿ `ಧರ್ಮ' ಎಂದು ಕೊಡಲಾಗಿದೆ. ಅಮೆರಿಕನ್‍ ನಿಘಂಟುಗಳಲ್ಲಿನ ಕೆಲವು ಉಚ್ಚಾರಣೆ ವ್ಯತ್ಯಾಸಗಳನ್ನೂ ಇಲ್ಲಿ ಸೇರಿಸಿದೆ. ಕನ್ನಡ ವರ್ಣಮಾಲೆ ಅಭಿವ್ಯಕ್ತಿಗೊಳಿಸಬಹುದಾದಷ್ಟು ಹತ್ತಿರದ ಉಚ್ಚಾರಣೆ ಇದು ಎಂದು ಗ್ರಹಿಸಬೇಕು. ಕಾಲಕಳೆದಂತೆ ಪದಗಳ ಅರ್ಥಛಾಯೆಗಳು ಬದಲಾಗಿರುವಂತೆ ಕೆಲವೆಡೆ ಅವುಗಳ ಉಚ್ಚಾರಣೆಯೂ ಬದಲಾವಣೆಯಾಗಿದೆ. ಉದಾಹರಣೆಗೆ wheel, white ಎಂಬುವನ್ನು ಹಿಂದೆ ಹ್ವೀಲ್‍, ಹ್ವೈಟ್‍ ಎಂದು ಉಚ್ಚರಿಸಲಾಗುತ್ತಿತ್ತು. ಈಗ ಇವನ್ನು ವೀಲ್‍, ವೈಟ್‍ ಎಂದು ಉಚ್ಚರಿಸಲಾಗುತ್ತದೆ.

    ಉಚ್ಚಾರಣೆಯ ವಿಷಯದಲ್ಲಿ: (i) ಎಲ್ಲ ಪ್ರಧಾನ ಪದಗಳಿಗೂ ಉಚ್ಚಾರಣೆ ಕೊಡಲಾಗಿದೆ; (ii) ಅಸಮಸ್ತ ಪದಗುಚ್ಛಗಳಿಗೆ ಉಚ್ಚಾರಣೆ ನೀಡಿಲ್ಲ; ಏಕೆಂದರೆ ಅವುಗಳ ಅಂಗಪದಗಳಿಗೆ ಉಚ್ಚಾರಣೆಯನ್ನು ಬೇರೆಡೆ ತಿಳಿಸಿರುತ್ತದೆ; (iii) ಅಸಮಸ್ತ ಪದಗುಚ್ಛದ ಯಾವುದಾದರೂ ಅಂಗಪದ ಎಲ್ಲೂ ಪ್ರಧಾನಪದವಾಗಿ ಉಲ್ೇಖವಾಗಿರದ ಸಂದರ್ಭದಲ್ಲಿ ಮಾತ್ರ ಆ ಅಸಮಸ್ತ ಪದಕ್ಕೆ ಉಚ್ಚಾರಣೆ ಕೊಡಲಾಗಿದೆ: Boyle's law; Dundreary whiskers.

  4. ಚಿತ್ರಗಳು: 1946ರ ಆವೃತ್ತಿಯಲ್ಲಿ ಸಂಪಾದಕರಿಗೆ ಮುನ್ನೂರು ಚಿತ್ರಗಳನ್ನಾದರೂ ಸೇರಿಸುವ ಆಸೆ ಇದ್ದರೂ ಅವರಿಗೆ ಅದು ಸಾಧ್ಯವಾಗಲಿಲ್ಲ. ಈ ಆವೃತ್ತಿಯಲ್ಲಿ (ನಾಲ್ಕು ಸಂಪುಟಗಳಿಂದ) 1630 ಚಿತ್ರಗಳನ್ನು ಒದಗಿಸಲಾಗಿದೆ.

  5. ಸಂಕ್ಷಿಪ್ತಗಳನ್ನೂ, ಸಂಕೇತಗಳನ್ನೂ ಪ್ರತ್ಯೇಕವಾಗಿ ಕೊಡದೆ ಪ್ರಧಾನ ಉಲ್ಲೇಖವಾಗಿ ಸೇರಿಸಲಾಗಿದೆ. ಈ ಪರಿಷ್ಕೃತ ಆವೃತ್ತಿಯ ಉದ್ದೇಶವನ್ನು ಮೊದಲನೆಯ ಆವೃತ್ತಿಯ ಮುನ್ನುಡಿಯಲ್ಲಿ ಹೇಳಿರುವ ಈ ಮಾತುಗಳು, ಕೆಲವು ಅಲ್ಪ ಮಾರ್ಪಾಡುಗಳೊಡನೆ, ಸಮರ್ಪಕವಾಗಿ ತಿಳಿಸುತ್ತವೆ: ಯಾರು ಸುಮಾರು ಪದವಿ ದರ್ಜೆಯಷ್ಟು ಇಂಗ್ಲಿಷ್‍ ಭಾಷಾಜ್ಞಾನವನ್ನು ಪಡೆದು, ಈಗಿನ ಪ್ರಪಂಚಕ್ಕೆ ಆಸಕ್ತಿಕರಗಳಾದ ವಿವಿಧ ವಿಷಯಗಳ ಮೇಲೆ ಬರುತ್ತಿರುವ ಇಂಗ್ಲಿಷ್‍ ಗ್ರಂಥಗಳ ಮತ್ತು ಪತ್ರಿಕೆಗಳ ವ್ಯಾಸಂಗಕ್ಕೆ ಶಬ್ದಾರ್ಥಜ್ಞಾನ ಸಹಾಯವನ್ನು ಆಪೇಕ್ಷಿಸುವರೋ ಅಂಥವರ ಉಪಯೋಗಕ್ಕಾಗಿಯೂ, ಯಾರು ಇಂಗ್ಲಿಷ್‍ ಮೂಲಗಳಿಂದ ತೆಗೆದ ಭಾವಗಳನ್ನೂ ವಿಷಯಜ್ಞಾನವನ್ನೂ ಕನ್ನಡ ಜನಕ್ಕೆ ತಿಳಿಸುವ ಕೆಲಸದಲ್ಲಿ ನಿರತರಾಗಿರುವರೋ ಅಂತಹ ಉಪಾಧ್ಯಾಯರು, ಭಾಷಾಂತರಕಾರರು, ಲೇಖಕರು, ಪತ್ರಿಕೋದ್ಯೋಗಿಗಳು, ಉಪನ್ಯಾಸಕರು, ಮೊದಲಾದವರ ಸಹಾಯಕ್ಕಾಗಿಯೂ ನಿಘಂಟು ರಚನೆಯಾಗಬೇಕೆಂಬುದು ಸಂಪಾದಕ ಮಂಡಲಿಯ ಉದ್ದೇಶವಾಯಿತು. ಅಖಿಲ ಕರ್ಣಾಟಕದ ಜನರಿಗೆ ಈ ನಿಘಂಟು ಅಂಗೀಕಾರಾರ್ಹವಾಗಿರಬೇಕೆಂದೂ, ಆಧುನಿಕ ವಿಜ್ಞಾನ ಮತ್ತು ಆಧುನಿಕ ಭಾವಗಳ ಅರ್ಥವಿವರಣೆಗೆ ವಿಶೇಷವಾದ ಗಮನವನ್ನು ಕೊಡಬೇಕೆಂದೂ ಉದ್ದೇಶಪಡಲಾಯಿತು. ಶಾಸ್ತ್ರಪ್ರಪಂಚದಲ್ಲಿ ಪಂಡಿತರಾದವರಿಗಾಗಲಿ ವಿಶೇಷಜ್ಞರಿಗಾಗಲಿ ಉದ್ದೇಶಿಸದೆ, ಸಾಮಾನ್ಯ ವಾಚಕನಿಗೆ ಪ್ರಚಲಿತ ಇಂಗ್ಲಿಷ್‍ ಜ್ಞಾನವನ್ನು ಪ್ರಚಲಿತ ಕನ್ನಡದಲ್ಲಿ ತಿಳಿಸುವ ನಿಘಂಟಾಗಿರಬೇಕೆಂಬುದೇ ನಮ್ಮ ಧ್ಯೇಯ. ಪಾಠಶಾಲೆಗಳಲ್ಲಿಯೂ ಕಾಲೇಜುಗಳಲ್ಲಿಯೂ ವಿಶ್ವವಿದ್ಯಾನಿಲಯಗಳಲ್ಲಿಯೂ ಎಲ್ಲ ಬೋಧ್ಯ ವಿಷಯಗಳಿಗೂ ಕನ್ನಡವನ್ನೇ ಬಳಸುತ್ತ ಬರಬೇಕೆಂದಿರುವ ಈಗಿನ ಸಂದರ್ಭದಲ್ಲಂತೂ ಇಂಥ ನಿಘಂಟು ಇನ್ನೂ ಹೆಚ್ಚು ಅವಶ್ಯವಾಗುತ್ತದೆಯಷ್ಟೆ. ಯಾವುದೇ ನಿಘಂಟು ಸರ್ವಸಂಪೂರ್ಣವಾಗಿ ಮತ್ತು ಎಲ್ಲರ ಅಪೇಕ್ಷೆಗಳನ್ನು ಪೂರೈಸುವಂತೆ ಇರಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಈ ನಿಘಂಟಿನ ವಿಷಯದಲ್ಲಿಯೂ ಸಂಪಾದಕವರ್ಗ ಪೂರ್ಣ ಶ್ರದ್ಧೆ ಮತ್ತು ಎಚ್ಚರಗಳಿಂದ ತನ್ನ ಕೆಲಸವನ್ನು ನಿರ್ವಹಿಸಿದ್ದರೂ, ಅಪರಿಹಾರ್ಯವಾಗಿ ಒದಗಿದ ಕೆಲವು ಕುಂದುಕೊರತೆಗಳ ಅರಿವು ಅದಕ್ಕೆ ಇದೆ. ಅವುಗಳನ್ನು ನಿವಾರಿಸುವುದು ಆಸಕ್ತ ಓದುಗರಿಗೆ ಸಾಧ್ಯವೆಂದು ಅದು ಭಾವಿಸಿದೆ. ಅಚ್ಚಿನ ತಪ್ಪು, ಅರ್ಥದ ತಪ್ಪು ಅಥವಾ ಕ್ಲಿಷ್ಟತೆ, ಪ್ರಾದೇಶಿಕವಾಗಿ ಪ್ರಚಾರದಲ್ಲಿರುವ ಸಮಾನಾರ್ಥಕ ಕನ್ನಡ ಪದಗಳು, ಸೇರಿಸಬೇಕೆನಿಸುವ ಇಂಗ್ಲಿಷ್‍ ಪದಗಳು-ಇವೇ ಮೊದಲಾದುವನ್ನು ಓದುಗರು ಸಂಪಾದಕರು, ಇಂಗ್ಲಿಷ್‍-ಕನ್ನಡ ನಿಘಂಟು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-570 006 ಇವರಿಗೆ ಬರೆದು ತಿಳಿಸಿದಲ್ಲಿ ನಿಘಂಟಿನ ವಿಭಾಗ ಅವರಿಗೆ ಕೃತಜ್ಞವಾಗಿರುವುದರ ಜೊತೆಗೆ ನಿಘಂಟಿನ ಮುಂದಿನ ಮುದ್ರಣಗಳಲ್ಲಿ ಅಥವಾ ಕಾಲಕಾಲಕ್ಕೆ ಹೊರತರಬೇಕೆಂದಿರುವ ಅನುಬಂಧ ಸಂಪುಟಗಳಲ್ಲಿ ಅವುಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮೈಸೂರು
ವಿಜಯದಶಮಿ
೧೦-೧೦-೮೯
ಎನ್‍.ಬಾಲಸುಬ್ರಹ್ಮಣ್ಯ
ಪ್ರಧಾನ ಸಂಪಾದಕ

© 2016 University of Mysore.