ನುಡಿನಮನ

ಮೈಸೂರು ವಿಶ್ವವಿದ್ಯಾನಿಲಯದ ಪ್ರಕಾಶನ ನಿರ್ದೇಶನಾಲಯವಾದ ಪ್ರಸಾರಾಂಗದ ಪ್ರಮುಖ ಚಟುವಟಿಕೆಗಳಲ್ಲಿ ಕೋಶನಿರ್ಮಾಣ ಕಾರ್ಯವೂ ಒಂದು. ಬೆಳೆಯುತ್ತಿರುವ ಭಾಷಾವ್ಯವಸ್ಥೆಯಲ್ಲಿ ದಿನಂಪ್ರತಿ ಹೊಸ ಹೊಸ ಪದಗಳ ಸೇರ್ಪಡೆಯಾಗುತ್ತಲೇ ಇರುತ್ತದೆ. ಭಾಷೆಗನುಗುಣವಾಗಿ ಕೋಶವೇ ಹೊರತು ಕೋಶಕ್ಕನುಗುಣವಾಗಿ ಭಾಷೆಯಲ್ಲ. ಆದರೂ ಭಾಷೆಯಲ್ಲಿ ನಿರಂತರವಾಗಿ ಸೇರುತ್ತಾ ಹೋಗುವ ಪದಗಳ ಸರಿಯಾದ ರೂಪ, ಪ್ರಯೋಗ, ಅದರಿಂದ ದೊರೆಯಬಹುದಾದ ಜನ್ಯಪದಗಳು, ಹೊಸದಾಗಿ ಸೇರ್ಪಡೆಯಾಗುವ ಪದಗಳಿಂದ ಸಾಧ್ಯವಾಗಬಹುದಾದ ಹೊಸ ಬಗೆಯ ಬಳಕೆಯ ಸಂಭಾವ್ಯತೆಗಳು ಇವೆಲ್ಲ ಕುತೂಹಲಕಾರಿಯಾದ ಸಂಗತಿಗಳಾಗಿರುತ್ತವೆ. ಇದು ಕೋಶಕಾರರ ಮೇಲೆ ಹೆಚ್ಚಿನ ಜವಾಬ್ದಾರಿಗಳನ್ನು ಹೊರಿಸುವುದರ ಜೊತೆಗೆ ಹೊಸ ಸವಾಲುಗಳನ್ನು ಕೂಡ ಒಡ್ಡುತ್ತಾ ಹೋಗುತ್ತವೆ. ಒಂದು ರೀತಿಯಲ್ಲಿ ಕೋಶಸಂಕಲನಕಾರ್ಯ ಭಾಷೆಯ ನಿಷ್ಕೃಷ್ಟತೆಯನ್ನು ಕಾಪಾಡುವತ್ತ ಒಂದು ದಿಶೆಯಲ್ಲಿ ಒಲವನ್ನು ತೋರಿದರೆ ಹೊಸದಾಗಿ ಹರಿದುಬಂದ ಮಣ್ಣಿನ ವಾಸನೆಯ ಹಾಗೂ ಅಭ್ಯಾಗತ ಪದಗಳನ್ನು ಮತ್ತು ಪ್ರಯೋಗಗಳನ್ನು ತನ್ನ ತೆಕ್ಕೆಯಲ್ಲಿ ಅಳವಡಿಸಿಕೊಳ್ಳುತ್ತಾ ಹೋಗುತ್ತದೆ. ತಲಕಾವೇರಿಯಾಗಿ ಹುಟ್ಟುವ ಭಾಷೆಗಳು ಮಹಾನದಿಗಳಾಗಿ ವಿಸ್ತರಿಸಿ ಬೆಳೆದು ಸಾಗರೋಪಮವಾದ ಜ್ಞಾನದಿಗಂತಗಳನ್ನು ತಲಪಲು ಕೋಶಗಳು ನೆರವಾಗುತ್ತವೆ.

ಮೈಸೂರು ವಿಶ್ವವಿದ್ಯಾನಿಲಯದ ಪರಿಷ್ಕೃತ ಇಂಗ್ಲಿಷ್‍-ಕನ್ನಡ ನಿಘಂಟಿನ ಅಡಕ ಮುದ್ರಿಕೆ (ಸಿ. ಡಿ.) ಆವೃತ್ತಿಯನ್ನು ಓದುಗರ ಕೈಯಲ್ಲಿಡುತ್ತಿರುವುದು ನನಗೆ ಅತ್ಯಂತ ಸಂತೋಷದ ಹಾಗೂ ಕೃತಕೃತ್ಯತೆಯ ಭಾವನೆಯನ್ನು ಮೂಡಿಸುವ ಸಂದರ್ಭವಾಗಿದೆ. ಸುಮಾರು ನಾಲ್ಕು ದಶಕಗಳ ಹಿಂದೆ ಹಂಬಲದ ಕನಸಾಗಿದ್ದ ಪರಿಷ್ಕೃತ ಇಂಗ್ಲಿಷ್‍-ಕನ್ನಡ ನಿಘಂಟು ಹಲವಾರು ಮಂದಿ ಮನೀಷಿಗಳ, ವಿದ್ವಾಂಸರ, ಸಂಶೋಧಕರ ನಿರಂತರ ಚಿಂತನೆ, ಅಧ್ಯವಸಾಯ ಮತ್ತು ದುಡಿಮೆಗಳ ಫಲವಾಗಿ ನನಸಾಗಿ ಕನ್ನಡಿಗರ ಕೈಸೇರುತ್ತಿದೆ.

ಕೋಶರಚನೆ ಅಪಾರ ಪರಿಶ್ರಮದ ಕೆಲಸ. ಆಳವಾದ ಪಾಂಡಿತ್ಯ, ಮೊನಚಾದ ವಿವೇಚನೆ, ಸಾಗರೋಪಮ ಆಳ ಅಗಲಗಳುಳ್ಳ ಅನುಭವ ಸಂಪತ್ತು, ಶ್ರಮಸಹಿಷ್ಣುತೆ, ದುಡಿಮೆಯ ಬಗ್ಗೆ ಒಲವು, ನಿರ್ವಿಕಾರವಾದ ಪೂರ್ವಗ್ರಹಪೀಡಿತವಲ್ಲದ ಪಾರದರ್ಶಕ ಮನೋಭಾವ ಇಂತಹ ಪರಿಕರಗಳು ತಟಿತ್‍ಸ್ಪರ್ಶಗೊಂಡು ಅವಿನಾಭಾವದಿಂದ ಮೇಳವಿಸಿದರೆ ಮಾತ್ರ ಈ ಬಗೆಯ ಕೆಲಸ ಸಾರ್ಥಕವೆನಿಸುತ್ತದೆ. ಕೋಶನಿರ್ಮಾಣ ಕಾರ್ಯದಲ್ಲಿ ಎಷ್ಟು ನಿರ್ದಿಷ್ಟತೆ, ನಿಷ್ಕೃಷ್ಟತೆ, ನಿಷ್ಠುರತೆ ಹಾಗೂ ವ್ಯಾಕರಣಬದ್ಧತೆ ಆವಶ್ಯಕವೋ ಅಷ್ಟೇ ಪ್ರಮಾಣದಲ್ಲಿ ನವೀನ ಭಾಷಾಪ್ರಯೋಗಗಳ ಬಗ್ಗೆ ತೆರೆದ ಮನಸ್ಸು, ಸಹೃದಯತೆ, ಸಮಚಿತ್ತಭಾವಗಳು ಕೂಡ ಮಹತ್ತ್ವದ್ದೆನಿಸುತ್ತವೆ. ಕ್ಲುಪ್ತ ಕಾರ್ಯಕುಶಲತೆಯ ಕೋಶಕಾರ ತನ್ನಲ್ಲಿ ಅನೇಕವೇಳೆ ಮುಕ್ತ ಮನಸ್ಸನ್ನೂ ಭಾಷಾಪ್ರಯೋಗಸಂಬಂಧವಾದ ಔದಾರ್ಯವನ್ನೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾಗುತ್ತದೆ. ಪಾಂಡಿತ್ಯ, ಪರಿಪಕ್ವತೆ, ಪರಿಶ್ರಮಗಳು ಮುಪ್ಪುರಿಗೊಂಡ ಸಾಧನಾಮಾರ್ಗದ ಫಲಶ್ರುತಿಯಾಗಿ ಉಪಲಬ್ಧಗೊಳ್ಳುವ ಸಿದ್ಧಿಗಳಲ್ಲಿ ನಿಘಂಟು ಕೂಡ ಒಂದು. ಭಾಷಾಭಿವ್ಯಕ್ತಿಗೆ ಪೂರಕವಾಗಿ ಭಾಷೆಯಲ್ಲಿ ಹೊಮ್ಮುವ ಹೊಸ ಛಾಯೆಗಳ ಪದಸಂಕುಲಕ್ಕೆ ಕೂಡ ಕೋಶ ಆಶ್ರಯ ಒದಗಿಸಬೇಕಾಗುತ್ತದೆ. ಹಾಗಾಗಿ ಕೋಶರಚನೆ ಒಂದು ಎಡೆಬಿಡದ ಪ್ರಕ್ರಿಯೆ. ಕನಿಷ್ಠ ಪ್ರತಿ ಐದು ವರ್ಷ ಅಥವಾ ಹತ್ತು ವರ್ಷಗಳಿಗೊಮ್ಮೆ ಕೋಶಗಳ ಪರಿಷ್ಕರಣ ಸೂಕ್ತವೆನಿಸುತ್ತದೆ. ಆದರೆ ನಮ್ಮ ಸೀಮಿತ ಮಾನವ ಸಂಪನ್ಮೂಲ ಹಾಗೂ ಹಣಕಾಸು ಲಭ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ಈ ಬಗೆಯ ಪರಿಷ್ಕೃತ ಕೋಶಗಳ ಪ್ರಕಟಣೆಯನ್ನು ಇಷ್ಟು ಅಂತರದಲ್ಲಿ ಮಾಡುವುದು ಪ್ರಾಯಃ ಅಸಾಧ್ಯವೆನಿಸುತ್ತದೆ. ಹಲವಾರು ಸೀಮಿತಗಳ ನಡುವೆ ಸಾಗಿಬಂದ ಇಂಗ್ಲಿಷ್‍ – ಕನ್ನಡ ನಿಘಂಟಿನ ಪರಿಷ್ಕೃತ ಆವೃತ್ತಿಯ ಪ್ರಕಟಣೆಯು ತನ್ನ ಗುರಿ ಮುಟ್ಟಿ ಲಕ್ಷಾಂತರ ಮಂದಿ ಓದುಗರ ಬೌದ್ಧಿಕ ಅಗತ್ಯಗಳನ್ನು ಈಡೇರಿಸಲು ಸಜ್ಜಾಗಿ ಸಿ. ಡಿ. ಆವೃತ್ತಿ ಕೂಡ ಹೊರಬರುತ್ತಿರುವುದು ತುಂಬಾ ನೆಮ್ಮದಿಯ ಹಾಗೂ ಸಂತಸದ ಸಂಗತಿ.

ಸಿ. ಡಿ. ಆವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಹಾಗೂ ಓದುಗರ ಅನುಕೂಲಕ್ಕಾಗಿ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಈ ಅಡಕಮುದ್ರಿಕೆ ಆವೃತ್ತಿಯಲ್ಲಿ ಟೆಕ್‍ ತಂತ್ರಾಂಶವನ್ನು ಬಳಸಲಾಗಿದ್ದು, ಹೈಪರ್‍ಲಿಂಕ್ಸ್ ಒದಗಿಸಲಾಗಿದೆ. ಮೂಲ ನಿಘಂಟಿನ ಚಿತ್ರಗಳನ್ನು ಪುನಾರಚಿಸಿ, ವರ್ಣರಂಜಿತವಾಗಿ ಮಾಡುವುದರ ಜೊತೆಗೆ ಕೆಲವು ಹೊಸ ಚಿತ್ರಗಳನ್ನು ಸೇರಿಸಲಾಗಿದೆ. ಪ್ರಮುಖ ಇಂಗ್ಲಿಷ್‍ ಪದಗಳಿಗೆ ಉಚ್ಚಾರಣ ಸೌಲಭ್ಯಕ್ಕಾಗಿ ಧ್ವನಿ ಸಹಾಯವನ್ನು ಕೂಡ ನೀಡಲಾಗಿದೆ. ಇದರ ಜೊತೆಗೆ ಶಾಲಾಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು, ಪರಿಷ್ಕೃತ ನಿಘಂಟಿನ ಸಂಕ್ಷಿಪ್ತ ಆವೃತ್ತಿಯನ್ನು ಕೂಡ ಹೊರತರುವ ಉದ್ದೇಶ ನಮಗಿದೆ. ಸಾಧ್ಯವಾದಷ್ಟು ಶೀಘ್ರವಾಗಿ ಸಂಕ್ಷಿಪ್ತ ಇಂಗ್ಲಿಷ್‍-ಕನ್ನಡ ನಿಘಂಟು ಕೂಡ ಹೊರಬರುವ ನಿರೀಕ್ಷೆ ಇದೆ.

ಪ್ರಸಾರಾಂಗದ ಎಲ್ಲ ಪ್ರಕಟಣ ಕಾರ್ಯಗಳಲ್ಲಿ ಸಕ್ರಿಯ ಆಸಕ್ತಿ ವಹಿಸಿ ನಮ್ಮ ಚಟುವಟಿಕೆಗಳಿಗೆ ನೆರವು ಹಾಗೂ ಮಾರ್ಗದರ್ಶನಗಳನ್ನು ಒದಗಿಸುತ್ತಿರುವ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ. ಜೆ. ಶಶಿಧರ ಪ್ರಸಾದ್‍ ಅವರಿಗೂ ಎಲ್ಲ ಹಂತಗಳಲ್ಲೂ ಆಡಳಿತಾತ್ಮಕ ನೆರವು ನೀಡುತ್ತಿರುವ ಕುಲಸಚಿವರಾದ ಶ್ರೀ ಎನ್‍. ಡಿ. ತಿವಾರಿ ಅವರಿಗೂ ಹಣಕಾಸು ಅಧಿಕಾರಿಯವರಾದ ಶ್ರೀ ಎಂ. ಕೆ. ಸಣ್ಣಸ್ವಾಮಿ ಅವರಿಗೂ ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ.

ಇಂಗ್ಲಿಷ್‍-ಕನ್ನಡ ನಿಘಂಟು ಪರಿಷ್ಕರಣ ಯೋಜನೆಯ ಸಲಹಾ ಮಂಡಲಿಯ ಅಧ್ಯಕ್ಷರಾಗಿ ೧೯೬೬ರಿಂದ ಅನುಕ್ರಮವಾಗಿ ಸೇವೆ ಸಲ್ಲಿಸಿದ ಪ್ರೊ. ದೇ. ಜವರೇಗೌಡ, ಪ್ರೊ. ಹಾ. ಮಾ. ನಾಯಕ, ಪ್ರೊ. ಪ್ರಭುಶಂಕರ ಅವರಿಗೂ ಸದಸ್ಯರಾಗಿ ಸೇವೆ ಸಲ್ಲಿಸಿದ ಎಲ್ಲ ಮಹನೀಯರಿಗೂ ಸಂಪಾದಕ ವರ್ಗದ ಎಲ್ಲ ಗಣ್ಯ ವಿದ್ವಾಂಸರಿಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ವಿಶ್ವವಿದ್ಯಾನಿಲಯದ ಹಾಗೂ ಕನ್ನಡ ಕುಲಕೋಟಿಯ ಪರವಾಗಿ ಅನಂತ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನಿಘಂಟಿನ ಪ್ರಧಾನ ಸಂಪಾದಕರಾಗಿ ಪ್ರೊ. ಎನ್‍. ಬಾಲಸುಬ್ರಹ್ಮಣ್ಯ ಅವರು ಹಾಗೂ ಸಹಾಯಕ ಸಂಪಾದಕರಾಗಿ ಶ್ರೀ ಬಾ. ವೇ. ಶ್ರೀಧರ ಮತ್ತು ಶ್ರೀಮತಿ ಜಿ. ಶ್ರೀದೇವಿ ವಿಶೇಷವಾಗಿ ಸಮರ್ಪಣ ಮನೋಭಾವದಿಂದ ದುಡಿದಿದ್ದಾರೆ. ಶ್ರೀ ಬಾ. ವೇ. ಶ್ರೀಧರ ಅವರು ನಿಘಂಟಿನ ಪರಿಷ್ಕರಣದ ಹೆಜ್ಜೆಹೆಜ್ಜೆಯಲ್ಲೂ ಅಪಾರ ಆಸಕ್ತಿವಹಿಸಿ ನಿಘಂಟಿಗೆ ಪ್ರಮಾಣಬದ್ಧತೆಯನ್ನೂ ವಿಶ್ವಾಸಾರ್ಹತೆಯನ್ನೂ ತಂದುಕೊಡುವಲ್ಲಿ ಅಹರ್ನಿಶಿ ದುಡಿದಿದ್ದಾರೆ. ನಿಘಂಟಿನ ನಾಲ್ಕೂ ಸಂಪುಟಗಳಲ್ಲಿ ಬರುವ ಬಹುತೇಕ ಪಾರಿಭಾಷಿಕ ಪದಗಳಿಗೆ ಅರ್ಥ ಬರೆದುಕೊಟ್ಟು, ನಿಘಂಟು ರಚನೆಯಲ್ಲಿ ಎಲ್ಲಾ ವಿಧದಲ್ಲೂ ನೆರವು ನೀಡಿದ ಪ್ರೊ. ಜೆ. ಆರ್‍. ಲಕ್ಷ್ಮಣರಾಯರಿಗೆ ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ.

ಪ್ರಸಕ್ತ ಇಂಗ್ಲಿಷ್‍-ಕನ್ನಡ ನಿಘಂಟಿನ ಸಿ. ಡಿ. ಆವೃತ್ತಿಯಲ್ಲಿ ಪೂರ್ವಭಾವಿ ತಾಂತ್ರಿಕ ಕೆಲಸಗಳನ್ನು ನಿರ್ವಹಿಸಿ ಕೊಟ್ಟಿರುವ ಲೀಲಾವತಿ ಟ್ರಸ್ಟ್‍ನ ಶ್ರೀ ಸಿ. ಎಸ್‍. ಯೋಗಾನಂದ ಅವರಿಗೂ, ಮೆ. ಶ್ರೀರಂಗ ಡಿಜಿಟಲ್‍ ಸಾಫ್ಟ್‍ವೇರ್‍ ಟೆಕ್ನಾಲಜೀಸ್‍ನ ಸಹೋದ್ಯೋಗಿ ಮಿತ್ರರಿಗೂ ಹಾಗೂ ಈ ಅಡಕ ಮುದ್ರಿಕೆ ಆವೃತ್ತಿಯನ್ನು ಹೊರತರಲು ನೆರವಾಗುತ್ತಿರುವ ಮೆ. ಪ್ರಿಸಂ ಬುಕ್ಸ್‍ (ಪ್ರೈ.) ಲಿಮಿಟೆಡ್‍ ಅವರಿಗೂ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಕೃತಜ್ಞತೆಗಳನ್ನು ಅರ್ಪಿಸಬಯಸುತ್ತೇನೆ.

ಪ್ರೊ. ಲಕ್ಷ್ಮೀನಾರಾಯಣ ಅರೋರಾ
ನಿರ್ದೇಶಕ, ಪ್ರಸಾರಾಂಗ

© 2016 University of Mysore.