ಅರ್ಪಣೆ*

*ಪರಿಷ್ಕೃತ ಇಂಗ್ಲಿಷ್‍-ಕನ್ನಡ ನಿಘಂಟಿನ ನಾಲ್ಕನೇ ಸಂಪುಟಕ್ಕೆ ನಿಘಂಟಿನ ಸಲಹಾಮಂಡಳಿಯ ಅಧ್ಯಕ್ಷರಾದ ಡಾ.ಪ್ರಭುಶಂಕರ ಅವರು ಬರೆದದ್ದು.

ಮೈಸೂರು ವಿಶ್ವವಿದ್ಯಾಲಯದ ಪರಿಷ್ಕೃತ ಇಂಗ್ಲಿಷ್‍-ಕನ್ನಡ ನಿಘಂಟಿನ ಸುಮಾರು ೬೫೦೦ ಪುಟಗಳ, ಬೃಹತ್‍ ಯೋಜನೆಯ ಕೊನೆಯ ಕಂತಾದ ಸುಮಾರು ೧೫೫೦ ಪುಟಗಳ ಈ ನಾಲ್ಕನೆಯ ಸಂಪುಟವನ್ನು ಕನ್ನಡಿಗರಿಗೆ ಅರ್ಪಿಸುವ ಈ ಸುಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪುರವರ ಮಾತುಗಳನ್ನು ಸ್ವಲ್ಪ ಬದಲಾಯಿಸಿ ``ಇದೊ ಮುಗಿಸಿ ತಂದಿಹೆವು ಈ ಬೃಹತ್‍ ಕೋಶಮಂ'' ಎಂದು ವಿನಯಬೆರೆತ ಹೆಮ್ಮೆಯಿಂದ ಹೇಳಲು ತುಂಬ ಸಂತೋಷವಾಗುತ್ತದೆ.

ಸಾವಿರದ ಒಂಬೈನೂರ ಅರವತ್ನಾಲ್ಕರಿಂದ ಅರವತ್ತೊಂಬತ್ತರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದು ವಿಶ್ವವಿದ್ಯಾನಿಲಯದ ಸರ್ವತೋಮುಖವಾದ ಬೆಳವಣಿಗೆಗೆ ಕಾರಣರೂ ವಿದ್ವತ್‍ ಪ್ರೇಮಿಯೂ ಆದ ಡಾ.ಕಾಲೂ ಲಾಲ್‍ (ಕೆ.ಎಲ್‍) ಶ್ರೀಮಾಲಿಯವರು ಇಂಗ್ಲಿಷ್‍-ಕನ್ನಡ ನಿಘಂಟಿನ ಪರಿಷ್ಕರಣೆಯ ಯೋಜನೆಯ ಕನಸನ್ನು ನನ್ನಲ್ಲಿ ತುಂಬಿ, ವಿದ್ವಾಂಸರ ಸಮಿತಿಯ ನೆರವಿನಿಂದ ಅದರ ನೀಲ ನಕಾಸೆ ಸಿದ್ಧವಾದಾಗ, ಈ ಯೋಜನೆಗೆ ಬೇಕಾಗುವ ಅಗಾಧವಾದ ದ್ರವ್ಯ ಸಂಪತ್ತನ್ನು ಮಂಜೂರು ಮಾಡಿ, ಅದು ಕಾರ್ಯಗತವಾಗುವುದಕ್ಕೆ ಕಾರಣಕರ್ತರಾದರೆಂದರೆ ಅವರಿಗಿದ್ದ ಕನ್ನಡ ಪ್ರೇಮ ಎಷ್ಟು ದಟ್ಟವಾದದ್ದು ಎಂಬುದು ಕಣ್ಣಿಗೆ ಕಟ್ಟುವಂತಾಗುತ್ತದೆ. ಎರಡು ಸಾವಿರದ ಇಸವಿಯ ಜನವರಿ ತಿಂಗಳಲ್ಲಿ ದೂರದ ಉದಯಪುರದಲ್ಲಿ ತೀರಿಕೊಂಡಿದ್ದರಿಂದ ಅವರು ಈ ನಿಘಂಟಿನ ನಾಲ್ಕೂ ಸಂಪುಟಗಳನ್ನು ಕಾಣಲಾಗಲಿಲ್ಲ. ಇವನ್ನು ಅವರಿಗೆ ತೋರಿಸಲಾಗದ್ದಕ್ಕಾಗಿ ವಿಷಾದದ ಛಾಯೆ ನನ್ನನ್ನು ದಟ್ಟವಾಗಿ ಕವಿಯುತ್ತಿದೆ. ಈ ನಾಲ್ಕೂ ಸಂಪುಟಗಳನ್ನು ಅವರ ಸವಿನೆನಪಿಗೆ ಸಮರ್ಪಿಸಿ ಕೃತಕೃತ್ಯತಾ ಭಾವವನ್ನು ಪಡೆಯುವುದಷ್ಟೇ ನಮ್ಮ ಪಾಲಿನ ಭಾಗ್ಯ. ಡಾ.ಶ್ರೀಮಾಲಿಯವರು ಮಾತ್ರವಲ್ಲ, ಈ ನಿಘಂಟು ಈ ರೂಪ ಪಡೆದು ಕನ್ನಡಿಗರ ಮನೆ, ಮನಗಳನ್ನು ಪ್ರವೇಶಿಸಲು ಕಾರಣರಾದ ಅನೇಕಾನೇಕ ವಿದ್ವನ್ಮಣಿಗಳು ಈಗ ನಮ್ಮ ನಡುವೆ ಇಲ್ಲ, ದಿಟದ ಮನೆಗೆ ತೆರಳಿದ್ದಾರೆ.

ಈ ನಾಲ್ಕೂ ಸಂಪುಟಗಳಿಗೆ ಮೂಲಮಾತೃಕೆ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ, ಕರಾರುವಾಕ್ಕಾಗಿ ಹೇಳಬೇಕಾದರೆ ಮೂವತ್ತು-ನಲವತ್ತರ ದಶಕಗಳಲ್ಲಿ ಇಂಗ್ಲಿಷ್‍ ಮತ್ತು ಕನ್ನಡ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿದವರಾಗಿದ್ದು, ಕೇವಲ ಸೇವಾಮನೋಭಾವದಿಂದ ಹಗಲಿರುಳೂ ದುಡಿದ ವಿದ್ವನ್ಮಣಿಗಳು ರಚಿಸಿದ ``ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್‍-ಕನ್ನಡ ನಿಘಂಟು''. ಆ ಸಂಪಾದಕ ಸಮಿತಿಯ ಮಹನೀಯರ ಉಲ್ಲೇಖ ಈಗಾಗಲೇ ಆಗಿದೆ. ಅವರು ರಚಿಸಿದ ನಿಘಂಟಿನ ಪ್ರತಿಗಳು ದೊರಕದಂತಾದಾಗ, ಈ ನಾಲ್ಕು ಸಂಪುಟಗಳ ಪರಿಷ್ಕೃತ ನಿಘಂಟಿನ ಯೋಜನೆ ಅಂಕುರಾರ್ಪಣೆಗೊಂಡು ಕಾರ್ಯಗತವಾಗಿದೆ. ಇದನ್ನು ಆಗುಮಾಡಿದ ಎಲ್ಲ ದಕ್ಷ ಸಂಪಾದಕರ ಹೆಸರುಗಳು ಈ ಸಂಪುಟದ ಮತ್ತು ಹಿಂದಿನ ಸಂಪುಟಗಳ ಪ್ರಸ್ತಾವನೆಯಲ್ಲಿ ದಾಖಲಾಗಿವೆ. ಅವರೆಲ್ಲರನ್ನೂ ನಾನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇನೆ.

ಒಂದು ವಿಜ್ಞಾಪನೆ: ಮೈಸೂರು ವಿಶ್ವವಿದ್ಯಾನಿಲಯದ ``ಇಂಗ್ಲಿಷ್‍-ಕನ್ನಡ ನಿಘಂಟಿ''ನ ಇತಿಹಾಸವನ್ನು ಅಧ್ಯಯನ ಮಾಡಬಯಸುವವರು ಪ್ರಸಾರಾಂಗವು ಪ್ರಕಟಿಸಿರುವ ಇದೇ ಹೆಸರಿನ ನಿಘಂಟಿನ (A-Z ನ ಒಂದೇ ಸಂಪುಟ) ಮುನ್ನುಡಿ ಭಾಗವನ್ನು ದಯಮಾಡಿ ಪರಿಶೀಲಿಸಬೇಕು.

ಈ ನಿಘಂಟಿನ ಆರಂಭದ ದಿನಗಳಿಂದ ಇಂದಿನವರೆಗೂ ಇದರಲ್ಲಿ ಒಂದಲ್ಲ ಒಂದು ಪಾತ್ರವಹಿಸಿರುವ ಮೂರು ಜನ ಮಾತ್ರ ಜೀವಂತರಾಗಿದ್ದೇವೆ. ಪ್ರಾಧ್ಯಾಪಕ ದೇ.ಜವರೇಗೌಡರು, ಪ್ರಾಧ್ಯಾಪಕ ಜೆ.ಆರ್‍.ಲಕ್ಷ್ಮಣರಾಯರು ಮತ್ತು ನಾನು. ಪ್ರೊ.ಎನ್‍.ಬಾಲಸುಬ್ರಹ್ಮಣ್ಯ ಅವರು ಉಪಸಂಪಾದಕರಾಗಿದ್ದು, ಬಳಿಕ ಈಗಿನವರೆಗೂ ಪ್ರಧಾನ ಸಂಪಾದಕರಾಗಿದ್ದಾರೆ. ಅವರು ಈ ನಿಘಂಟು ರಚನೆಯ ಕಾರ್ಯದಲ್ಲಿ ವಹಿಸಿರುವ ಪಾತ್ರ ಸ್ಮರಣೀಯವಾದದ್ದು. ಪ್ರಧಾನ ಸಂಪಾದಕತ್ವದ ಚುಕ್ಕಾಣಿ ಹಿಡಿದು ನಿಘಂಟಿನ ಸಾಗರದ ದಡ ಹಾಯಿಸಿದ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಪರಿಷ್ಕರಣ ಕಾರ್ಯದಲ್ಲಿ ತುಂಬ ಕಳಕಳಿ ತೋರಿಸಿ, ನಿಘಂಟು ಸಂಪುಟವನ್ನು ಬೇಗ ಹೊರತರಲು ಸರ್ವ ಪ್ರಯತ್ನವನ್ನೂ ಮಾಡುತ್ತಿರುವ, ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಲಕ್ಷ್ಮೀನಾರಾಯಣ ಅರೋರ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಎಲ್ಲರಿಗೂ ನಾನು ಅತ್ಯಂತ ಕೃತಜ್ಞ ಎಂದು ಹೇಳಿದ್ದೇನೆ. ಆದರೂ ಅತಿ ಹೆಚ್ಚಿನ ಕೃತಜ್ಞತೆ ಸಲ್ಲುವುದು ನಿಘಂಟಿನ ಎಲ್ಲ ಸಂಪುಟಗಳ ಸಂಪಾದನೆ, ಕರಡನ್ನು ತಿದ್ದುವುದು ಮತ್ತು ಪ್ರಕಟಣೆಯಲ್ಲಿ ತಮ್ಮನ್ನು ತಾವು ಮುಳುಗಿಸಿಕೊಂಡು ತಪ್ಪೇ ಇಲ್ಲದಂತೆ ಈ ಸಂಪುಟಗಳನ್ನು ಹೊರತಂದಿರುವ ಶ್ರೀ~ಬಾ.~ವೇ.~ಶ್ರೀಧರ ಅವರಿಗೆ. ಮೂವತ್ತಕ್ಕೂ ಹೆಚ್ಚಿನ ವರ್ಷಗಳ ಕಾಲ ಅವರು ಮಾಡುತ್ತಿರುವ ಕೆಲಸವನ್ನು ಅತ್ಯಂತ ಹತ್ತಿರದಿಂದ ನೋಡುತ್ತಿದ್ದೇನೆ. ಅವರ ಸಂಸ್ಕೃತ, ಇಂಗ್ಲಿಷ್‍, ಕನ್ನಡ ಮತ್ತು ವಿಜ್ಞಾನ ವಿಷಯಗಳ ಜ್ಞಾನ, ಈ ನಿಘಂಟಿನ ಕಾರ್ಯದಲ್ಲಿ ಅವರು ಸಾಧಿಸಿಕೊಂಡ ತನ್ಮಯತೆ ಅನ್ಯತ್ರ ನಾವು ಅಪರೂಪವಾಗಿ ಮಾತ್ರ ಕಾಣುವಂತಹುದು. ಅವರ ಜೊತೆಗೆ ಹೊಯ್‍ಕಯ್ಯಾಗಿ ನಿಘಂಟಿನ ಕಾರ್ಯದಲ್ಲಿ ತನ್ಮಯತೆಯಿಂದ ತೊಡಗಿ, ಅವರಂತೆಯೇ ಮೂರು ದಶಕಗಳಿಗಿಂತಲೂ ನಿಘಂಟಿನ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಜಿ.ಶ್ರೀದೇವಿ ಅವರ ಸೇವೆಯನ್ನೂ ಸ್ಮರಿಸುತ್ತೇನೆ. ಅವರಿಬ್ಬರ ಶ್ರಮಕ್ಕೆ ತಕ್ಕ ಮಾನ್ಯತೆ ಮತ್ತು ಕಾನೂನುಬದ್ಧವಾಗಿ ದೊರಕಬೇಕಾದ ಸವಲತ್ತುಗಳು ಅವರಿಗೆ ಸಿಗದೆ ಇರುವುದು ನನಗೆ ತುಂಬ ದುಃಖವನ್ನುಂಟುಮಾಡಿದೆ.

ಅವರ ಸಹೋದ್ಯೋಗಿಗಳಾದ ಶ್ರೀ ದಾಸೇಗೌಡ ಹಾಗೂ ಶ್ರೀ ಸಿದ್ದರಾಮು ಅವರುಗಳು ತುಂಬ ಶ್ರಮವಹಿಸಿ ರಜಾ ದಿನಗಳಲ್ಲೂ ಬಂದು ಹೋಟೊಕಂಪೋಸ್‍ ಮಾಡಿ, ಈ ಯೋಜನೆಯ ಯಶಸ್ಸಿಗೆ ಕಾರಣರಾಗಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳು.

ಈ ನಿಘಂಟಿನ ಕಾರ್ಯ ಪ್ರಾರಂಭವಾದಾಗ ಪ್ರಾಧ್ಯಾಪಕ ಪ್ರೊ.ದೇ.ಜವರೇಗೌಡರು ನಿಘಂಟು ಸಲಹಾಮಂಡಲಿಯ ಅಧ್ಯಕ್ಷರಾಗಿದ್ದರು.

ಈ ಯೋಜನೆ ಮುಗಿದು ನಾಲ್ಕನೆಯ ಸಂಪುಟ ಹೊರಬರುತ್ತಿರುವಾಗ ಅವರ ಪುತ್ರ ಡಾ.ಜೆ.ಶಶಿಧರ ಪ್ರಸಾದರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ. ಮಂಗಳಕರವಾದ ಈ ಯೋಗ ನನಗೆ ತುಂಬ ಸಂತೋಷವನ್ನು ನೀಡಿದೆ.

ಒಂದು ಸಂತೋಷದ ಘಟನೆಯೊಂದಿಗೆ ಈ ಅರ್ಪಣಾ ಭಾಗವನ್ನು ಮುಗಿಸುತ್ತೇನೆ. ಕಲ್ಕತ್ತೆಯ ರಾಷ್ಟ್ರೀಯ ಗ್ರಂಥಾಲಯಕ್ಕೆ ನಾನು ಮೂರು ವರ್ಷಗಳ ಹಿಂದೆ ಭೇಟಿ ಕೊಟ್ಟಿದ್ದಾಗ ಅಲ್ಲಿನ ಒಂದು ಭಾಷಾ ವಿಭಾಗದ ಮುಖ್ಯಸ್ಥರು ನನ್ನನ್ನು ನೋಡಿದೊಡನೆಯೇ ಇಂಗ್ಲಿಷ್‍-ಕನ್ನಡ ನಿಘಂಟಿನ ಎರಡನೆಯ ಸಂಪುಟವನ್ನು ತಂದು ಅದಕ್ಕೆ ನಾನು ಸಹಿ ಹಾಕಬೇಕೆಂದು ಕೋರಿದರು. ನಾನು ಆಶ್ಚರ್ಯಚಕಿತನಾಗಿ ``ಏಕೆ?'' ಎಂದು ಕೇಳಿದೆ. ಅದಕ್ಕೆ ಅವರು ಹೇಳಿದ್ದು ಹೀಗೆ: ``ನೀವು ಮಾಡಿರುವ ಕೆಲಸದ ಮಹತ್ತು ನಿಮಗೇ ತಿಳಿಯದು. ನಮ್ಮ ಈ ರಾಷ್ಟ್ರೀಯ ಗ್ರಂಥಾಲಯಕ್ಕೆ (National Library) ಎಲ್ಲಾ ಭಾಷೆಗಳ ನಿಘಂಟುಗಳು ಬರುತ್ತವೆ. ಆದರೆ ಯಾವುದೇ ಭಾಷೆಯ ನಿಘಂಟೂ ಈ ಪ್ರಮಾಣದಲ್ಲಿ ಇಂತಹ ಗುಣಮಟ್ಟದೊಂದಿಗೆ ತಯಾರಾಗಿಲ್ಲ.'' ಅಷ್ಟೇ ಅಲ್ಲ; ಈ ವರ್ಷದ ಮೊದಲಲ್ಲಿ ಮತ್ತೆ ಅಲ್ಲಿಗೆ ಹೋಗಿದ್ದಾಗ ಮೂರನೆಯ ಸಂಪುಟವನ್ನು ತಂದು, ಅದಕ್ಕೂ ಹಸ್ತಾಕ್ಷರ ಹಾಕಿಸಿಕೊಂಡು ಅವೇ ಮಾತುಗಳನ್ನು ಹೇಳಿದರು. ಆಗ ಶ್ರೀ ಕುವೆಂಪುರವರು ಕನ್ನಡ ವಿಶ್ವಕೋಶ, ಈ ನಿಘಂಟು ಸಂಪುಟಗಳನ್ನು ಕುರಿತು ಹೇಳಿದ ಮಾತುಗಳು ನೆನಪಿಗೆ ಬರುತ್ತಿವೆ: ``ಕನ್ನಡಿಗರಿಗೆ ತಾವು ಮಾಡಿದ ಕೆಲಸವನ್ನು ಇತರರ ಗಮನಕ್ಕೆ ತರುವಂತೆ ತುತ್ತೂರಿ ಊದುವ ಕಲೆ ಏನೇನೂ ಸಿದ್ಧಿಸಿಲ್ಲ!''

ಮೈಸೂರು
೨೮.೭.೨೦೦೪
ಪ್ರಭುಶಂಕರ ಅಧ್ಯಕ್ಷ
ನಿಘಂಟು ಸಲಹಾಮಂಡಲಿ

© 2016 University of Mysore.