ಗ್ರಂಥಪಾಲಕರ ಸ್ವಾಗತ ಸಂದೇಶ

ಆತ್ಮೀಯ ಸಹೃದಯರೆಲ್ಲರಿಗೂ ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯದ ಜಾಲತಾಣಕ್ಕೆ ಸುಸ್ವಾಗತ...

ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯವು ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಪೂರಕವಾದಂತಹ ಸೇವಾ ಕೇಂದ್ರವಾಗಿರುತ್ತದೆ. ಈ ಗ್ರಂಥಾಲಯವು ರಾಜ್ಯದ ಇನ್ನಿತರ ಗ್ರಂಥಾಲಯಗಳಿಗಿಂತ ತುಂಬಾ ಹಿರಿಯದಾದ ಮತ್ತು ಪ್ರಖ್ಯಾತಿ ಹೊಂದಿದ ಗ್ರಂಥಾಲಯವಾಗಿರುತ್ತದೆ. ಗ್ರಂಥಾಲಯದ ಪ್ರಾರಂಭಿಕ ಸಂಗ್ರಹವು ಕೇವಲ 2,311 ಸಾವಿರ ಪುಸ್ತಕಗಳಿಂದ ಪ್ರಾರಂಭವಾಗಿದ್ದು, ಇದೀಗ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳ ಸಮೂಹದ ಒಟ್ಟು ಸಂಗ್ರಹ ಸುಮಾರು 12.5 ಲಕ್ಷಕ್ಕೂ ಮೀರಿರುತ್ತದೆ. ಗ್ರಂಥಾಲಯದ ಸಂಗ್ರಹಗಳಲ್ಲಿ ಪುಸ್ತಕಗಳು, ನಿಯತಕಾಲಿಕೆಗಳು, ಮಹಾಪ್ರಬಂಧಗಳು, ವಾರ್ಷಿಕ ವರದಿ ಸಂಪುಟಗಳು, ಗೆಜೆಟ್‍ಗಳು, ತಾಳೆಗರಿಗಳು, ಐತಿಹಾಸಿಕ ಹಿನ್ನಲೆಯುಳ್ಳ ಅಪರೂಪದ ಅಮೂಲ್ಯ ಗ್ರಂಥಗಳು ಮತ್ತು ವಿದ್ಯುನ್ಮಾನ ರೂಪದ ದತ್ತಾಂಶ/ತಂತ್ರಾಂಶಗಳನ್ನು ಸಹ ಒಳಗೊಂಡಿರುತ್ತದೆ. ಗ್ರಂಥಾಲಯವು ಪ್ರತಿದಿನ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಘಂಟೆಯವರೆಗೆ ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಭಾನುವಾರ ಮತ್ತು ಕೆಲವು ರಜಾದಿನಗಳಲ್ಲಿಯೂ ಸಹ ಗ್ರಂಥಾಲಯವು ಬೆಳಿಗ್ಗೆ 10.00 ಘಂಟೆಯಿಂದ ಸಂಜೆ 5.00 ಘಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.

ಗ್ರಂಥಾಲಯವು ಸಾಂಪ್ರದಾಯಿಕ ಸೇವಾ ಸೌಲಭ್ಯಗಳ ಜೊತೆಗೆ ಮಾಹಿತಿ ಸಂವಹನ ತಂತ್ರಜ್ಞಾನದ ಸೇವಾ ಸೌಲಭ್ಯಗಳನ್ನು ಸಹ ಒದಗಿಸುತ್ತಿದೆ. ಗ್ರಂಥಾಲಯದ ಕಾರ್ಯ ಚಟುವಟಿಕೆಗಳನ್ನು ತಂತ್ರಾಂಶವನ್ನು ಬಳಸಿಕೊಂಡು ಗಣಕೀಕರಣಗೊಳಿಸಲಾಗಿದೆ. ಗಣಕೀಕರಣದ ಮೂಲಕ ಗ್ರಂಥಾಲಯದ ಸಂಗ್ರಹಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಗ್ರಂಥಾಲಯದ ವಿವಿಧ ಹಳೆಯ ವಿಭಾಗಗಳ ಜೊತೆಗೆ ಹೊಸದಾಗಿ ಕೆಳಕಂಡ ನಾಲ್ಕು ಪ್ರಮುಖ ಮಾಹಿತಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

1) ಉದ್ಯೋಗ ಮಾಹಿತಿ ಸಂಪನ್ಮೂಲ ಕೇಂದ್ರ,
2) ವಿದ್ಯುನ್ಮಾನ ಮಾಹಿತಿ ಸಂಪನ್ಮೂಲ ಕೇಂದ್ರ,
3) ದೃಷ್ಟಿ ವಿಶ್ವಾಸಿಗರ ಕಲಿಕಾ ಸಂಪನ್ಮೂಲ ಸೇವಾ ಕೇಂದ್ರ,
4) ಅಂಗವಿಕಲ ಚೇತನರ ಮಾಹಿತಿ ಸಂಪನ್ಮೂಲ ಸೇವಾ ಕೇಂದ್ರ.

ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗ್ರಂಥಾಲಯದ ಜಾಲತಾಣದ ಮೂಲಕ ಪಡೆಯಬಹುದಾಗಿದೆ.

ಗ್ರಂಥಾಲಯದಲ್ಲಿ ಲಭ್ಯವಿರುವ ವಿದ್ಯುನ್ಮಾನ ರೂಪದ ಎಲ್ಲಾ ಸಂಪನ್ಮೂಲಗಳ ಸೇವೆಗಳನ್ನು ಮಾನಸಗಂಗೋತ್ರಿ ಆವರಣದ ಹೊರಗಿನಿಂದಲೂ ತಂತ್ರಾಂಶದ ಮೂಲಕ ಪಡೆಯಬಹುದಾಗಿದೆ. ಇತ್ತೀಚಿನ ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳಾದ ವಿದ್ಯುನ್ಮಾನ ಪುಸ್ತಕಗಳು, ನಿಯತಕಾಲಿಕೆಗಳು, ದತ್ತಾಂಶಗಳನ್ನು ಒಳಗೊಂಡಿರುತ್ತದೆ. ವಿಶ್ವವಿದ್ಯಾನಿಲಯ ಅನುದಾನದ ಆಯೋಗವು ಸ್ಥಾಪಿಸಿರುವ ಸಂಸ್ಥೆಯ ಸಹಯೋಗದೊಂದಿಗೆ 24 ಪ್ರಮುಖ ಪ್ರಕಾಶಕರ ವಿದ್ಯುನ್ಮಾನ ನಿಯಕಾಲಿಕೆಗಳು ಹಾಗೂ ದತ್ತಾಂಶಗಳ ಸೌಲಭ್ಯವನ್ನು ಪಡೆಯಬಹುದಾಗಿದೆ. ಶೋಧಗಂಗಾ ಯೋಜನೆಯಡಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಕೆಯಾಗುವ ಎಲ್ಲಾ ಮಹಾಪ್ರಬಂಧಗಳನ್ನು ವಿದ್ಯುನ್ಮಾನ ರೂಪದಲ್ಲಿ ಪಡೆಯುವ ಸೌಲಭ್ಯವನ್ನು ಹಾಗೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ, ಸಂಶೋಧಕರ ಪ್ರಕಟಣೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಮೂಲಕ ಪಡೆಯುವ ಸೌಕರ್ಯವನ್ನು ಸಹ ಹೊಂದಿರುತ್ತದೆ.

ವಿಶ್ವವಿದ್ಯಾನಿಲಯವು ರೂಪಿಸಿರುವ ನಿಯಮಾವಳಿ ಪ್ರಕಾರ ವಿಶ್ವವಿದ್ಯಾನಿಲಯಕ್ಕೆ ಆಂಗ್ಲಭಾಷೆಯಲ್ಲಿ ಸಲ್ಲಿಕೆಯಾಗುವ ಮಹಾಪ್ರಬಂಧಗಳಿಗೆ ಕೃತಿಚೌರ್ಯ ಪರಿಶೀಲನಾ ವರದಿಯನ್ನು ಒದಗಿಸಲಾಗುವುದು. ಒಟ್ಟಿನಲ್ಲಿ ವಿವಿಧ ವರ್ಗಗಳ ಓದುಗರ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮಾಹಿತಿ ಸಂಪನ್ಮೂಲಗಳನ್ನು ಒದಗಿಸುವ “ಏಕೈಕ ಮಾಹಿತಿಯ ಮಹಾದ್ವಾರ” ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯವು ಎಂದು ತಿಳಿಸಲು ಹರ್ಷಿಸುತ್ತೇನೆ. ಎಲ್ಲರಿಗೂ ಶುಭವಾಗಲಿ.

ವಂದನೆಗಳು,
ಡಾ. ಪಿ.ಸರಸ್ವತಿ
ಗ್ರಂಥಪಾಲಕರು.