Centered Image

 

           à²•à³à²µà³†à²‚ಪು ಕನ್ನಡ ಅಧ್ಯಯನ ಸಂಸ್ಥೆ : ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಚಟುವಟಿಕೆಗಳನ್ನೆಲ್ಲ ಕೇಂದ್ರೀಕರಿಸುವ ದೃಷ್ಟಿಯಿಂದ ರೂಪುಗೊಂಡ ಸಂಸ್ಥೆ (1966). ಇದು ಈ ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಮೊದಲನೆಯ ಸಂಸ್ಥೆಯೂ (ಇನ್‍ಸ್ಟಿಟ್ಯೂಟ್) ಹೌದು. ತನ್ನ ಸ್ವರೂಪ ವ್ಯಾಪ್ತಿಗಳಲ್ಲಿ ಭಾರತೀಯ ಭಾಷೆಯೊಂದರ ಅಧ್ಯಯನಕ್ಕೆ ಈ ಸಂಸ್ಥೆ ವಿಶಿಷ್ಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆಯಲ್ಲಿ ಮತ್ತು ಕನ್ನಡ ಭಾಷಾಸಾಹಿತ್ಯಗಳ ಚಟುವಟಿಕೆಗಳ ಇತಿಹಾಸದಲ್ಲಿ ಅಧ್ಯಯನ ಸಂಸ್ಥೆ ಅಸ್ತಿತ್ವಕ್ಕೆ ಬಂದದ್ದು ಮಹತ್ತ್ವಪೂರ್ಣವಾದ, ಪರಿಣಾಮಕಾರಿಯಾದ ಘಟನೆ. ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಿ, ಆಡಳಿತದ ಎಲ್ಲ ಸ್ತರಗಳಲ್ಲಿಯೂ ಆಡಳಿತ ಭಾಷೆಯಾಗಿ, ಕನ್ನಡನಾಡಿನ ಜನಜೀವನದಲ್ಲಿ ಪ್ರಥಮ ಭಾಷೆಯಾಗಿ ಕನ್ನಡಕ್ಕೆ ಗೌರವದ ಸ್ಥಾನಮಾನಗಳು ಲಭಿಸಬೇಕೆಂಬ ಸಂಕ್ರಮಣ ಕಾಲದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಆರಂಭವಾಯಿತು. ಬೋಧನೆ, ಸಂಶೋಧನೆ, ಸಂಪಾದನೆಗಳೊಂದಿಗೆ ಬೇರೆ ಭಾಷೆಗಳಿಂದ ಬಗೆಬಗೆಯಾದ ಗ್ರಂಥಗಳನ್ನು ಕನ್ನಡಕ್ಕೆ ತರಬೇಕು, ಕನ್ನಡದ ಶ್ರೇಷ್ಠಕವಿ ಕೃತಿಗಳನ್ನು ಇತರ ಭಾಷೆಗಳವರಿಗೆ ಪರಿಚಯಿಸಬೇಕು, ಇನ್ನೂ ಬೆಳಕಿಗೆ ಬಾರದ ಪ್ರಾಚೀನ ಗ್ರಂಥಗಳನ್ನು ಶಾಸ್ತ್ರೀಯವಾಗಿ ಪ್ರಕಟಿಸಬೇಕು, ಜಾನಪದದಂಥ ಮೂಲೆಗುಂಪಾದ ವಿಷಯಗಳನ್ನು ಅಧ್ಯಯನದ ವ್ಯಾಪ್ತಿಗೆ ಒಳಪಡಿಸಬೇಕು, ಭಾರತೀಯ ಸಾಹಿತ್ಯದ ಹಿನ್ನೆಲೆಯಲ್ಲಿ ಕನ್ನಡದ ವಲಯವನ್ನು ವಿಸ್ತೃತಗೊಳಿಸಬೇಕು, ಕನ್ನಡ ಭಾಷೆಯನ್ನು ಆಧುನಿಕ ಕಾಲಕ್ಕೆ ಅನುಗುಣವಾಗಿ ಬಲಪಡಿಸಬೇಕು-ಇವೇ ಮೊದಲಾದ ಉದ್ದೇಶ ಗಳಿಗನುಗುಣವಾಗಿ ಸುವ್ಯವಸ್ಥಿತವಾದ ಯೋಜನೆಗಳನ್ನು ಕೈಗೊಂಡು, ಅವನ್ನು ಶ್ರದ್ಧಾನಿಷ್ಠೆಗಳಿಂದ ಕಾರ್ಯರೂಪಕ್ಕೆ ತರುವ, ಕನ್ನಡದ ಬಹುಮುಖ ಬೆಳೆವಣಿಗೆಗೆ ಉತ್ತೇಜನ ನೀಡುವ, ನಾನಾ ಕಡೆ ಹಂಚಿಹೊದ ಶಕ್ತಿಗಳನ್ನೆಲ್ಲ ಒಂದೆಡೆ ಸೇರಿಸುವ ರಂಗವಾಗಿ ಸಜ್ಜುಗೊಳಿಸಲು ಕನ್ನಡ ಅಧ್ಯಯನ ಸಂಸ್ಥೆ ರೂಪುಗೊಂಡಿತು.

ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಮಹೋತ್ಸವದ ಅಂಗವಾಗಿ ನಡೆದ ಕನ್ನಡ ಲೇಖಕರ ಸಮ್ಮೇಳನವನ್ನು ಉದ್ಘಾಟಿಸುವ ಸಮಯದಲ್ಲಿಯೇ (1966 ಡಿಸೆಂಬರ್ 8), ಆಗಿನ ಕುಲಪತಿ ಕೆ.ಎಲ್.ಶ್ರೀಮಾಲಿ ಅವರು ಕನ್ನಡ ಅಧ್ಯಯನ ಸಂಸ್ಥೆಯನ್ನೂ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಅವರು ಕನ್ನಡ ಅಧ್ಯಯನ ಸಂಸ್ಥೆ ಈ ನಾಡಿನ ಭಾಷೆ, ಸಾಹಿತ್ಯ, ಸಂಸ್ಕøತಿ, ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಂದಾದೀಪವಾಗಲೆಂದೂ ಸಾಹಿತ್ಯ ಕ್ಷೇತ್ರದ ಅಧ್ವರ್ಯುಗಳಾದ ತಾವೂ ತಮ್ಮ ಮುಂದಿನ ಪೀಳಿಗೆಗಳೂ ಅದಕ್ಕೆ ಸದಾ ಸಹಕಾರದ ಎಣ್ಣೆಯನ್ನು  ತುಂಬುವ ಅವಕಾಶವಿರಲೆಂದೂ ತಾವು ಹೃತ್ಪೂರ್ವಕವಾಗಿ ಹಾರೈಸುವುದಾಗಿ  ಅಬಿsಪ್ರಾಯ ವ್ಯಕ್ತಪಡಿಸಿದ್ದರು. ಅವರ ಮಾತುಗಳು ಕನ್ನಡದ ಸರ್ವತೋಮುಖವಾದ ಅಭ್ಯುದಯಕ್ಕೆ ಇಂಥದೊಂದು ಸಂಸ್ಥೆಯ ಸ್ಥಾಪನೆಯ ಅಗತ್ಯವಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾಗಿದ್ದ ದೇ.ಜವರೇಗೌಡರು, ಈ ಸಂಸ್ಥೆಯೊಂದು ಭೂಮ ಬಂಧುರ ವಿಸ್ಮಯವಾಗಿ, ಕರ್ನಾಟಕ ಸಾಹಿತ್ಯ ಸಂಸ್ಕೃತಿಗಳ ತಲಕಾವೇರಿಯಾಗಿ, ಕನ್ನಡಿಗರ ಪವಿತ್ರ ಯಾತ್ರಾಸ್ಥಾನವಾಗಿ ನಾಡಿನ ಪುಣ್ಯವೇ ಸಾಕಾರಗೊಂಡಂತೆ ವಿಕಾಸಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದರು. ಈ ಮಾತಿಗೆ ಸಾಕ್ಷಿಯಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಅದ್ವಿತೀಯವಾಗಿ ರೂಪುತಳೆದಿದೆ. 

ವಿಶ್ವವಿದ್ಯಾನಿಲಯದ ಓರಿಯೆಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟಿನ ಕನ್ನಡ ಸಂಪಾದನ ವಿಭಾಗವನ್ನು ಬೇರ್ಪಡಿಸಿ, ಕನ್ನಡ ಸ್ನಾತಕೋತ್ತರ ಬೋಧನ ಮತ್ತು ಸಂಶೋಧನ ವಿಭಾಗಗಳೊಡನೆ ಕೂಡಿಸುವುದರೊಂದಿಗೆ ಕನ್ನಡ ಅಧ್ಯಯನ ಸಂಸ್ಥೆ ಆರಂಭವಾಯಿತು. ಆಮೇಲೆ ಅದಕ್ಕೆ ಅನೇಕ ವಿಭಾಗಗಳು ಹೊಸದಾಗಿ ಕೂಡಿಕೊಂಡುವು.

ಅನಂತರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಸ್ತೃತಗೊಂಡಿತು.  ಬೋಧನಾಂಗ, ಸಂಶೋಧನಾಂಗ, ಪ್ರಕಟಣಾಂಗ, ಕಾರ್ಯಾಂಗ ಹೀಗೆ ವಿಸ್ತಾರವಾದ ಹಾಗೂ ವ್ಯಾಪಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿತು. ವಿವಿಧ ಶಾಖೆಗಳ, ಉಪಶಾಖೆಗಳ ಸಾಧನೆಗಳನ್ನೂ ಕಾರ್ಯಚಟುವಟಿಕೆಗಳನ್ನೂ ಏಕಸೂತ್ರದಲ್ಲಿ ನಿಯಂತ್ರಿಸುತ್ತ ಮಾನಸಗಂಗೋತ್ರಿಯ ಭವ್ಯ ಆವರಣದಲ್ಲಿ ಅದರ ಹೃದಯಪ್ರಾಯವಾಗಿ ಸಂಸ್ಥೆ ತಲೆಯೆತ್ತಿ ನಿಂತಿತು. ಕನ್ನಡ ವಿಭಾಗ ಕುವೆಂಪು, ಡಿ.ಎಲ್.ನರಸಿಂಹಾಚಾರ್, ತೀ.ನಂ.ಶ್ರೀಕಂಠಯ್ಯ ಇಂಥ ಅನೇಕ ಗಣ್ಯ ವಿದ್ವಾಂಸರ ಬೋಧನೆ ಮತ್ತು ಮಾರ್ಗದರ್ಶನದಲ್ಲಿ ಮುನ್ನಡೆದು ಕನ್ನಡಅಧ್ಯಯನಸಂಸ್ಥೆಯಾಗಿ ರೂಪುಗೊಂಡು ದೇ.ಜವರೇಗೌಡ, ಹಾ.ಮಾ. ನಾಯಕ, ಎಚ್.ತಿಪ್ಪೇರುದ್ರಸ್ವಾಮಿ ಮುಂತಾದ ವಿದ್ವಾಂಸರ ನಿರ್ದೇಶನದಲ್ಲಿ ಹಲವಾರು ಬಗೆಯ ಬೋಧನೆ, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ನಿರೀಕ್ಷೆಗೆ ತಕ್ಕಂತೆ ಬೆಳೆವಣಿಗೆಯನ್ನು ಸಾಧಿಸಿದೆ. 1994ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಹೆಸರನ್ನು ಕುವೆಂಪು ಅವರ ಗೌರವಾರ್ಥ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಂದು ಪುನರ್ನಾಮಕರಣ ಮಾಡಲಾಯಿತು.

ಹಳಗನ್ನಡ, ನಡುಗನ್ನಡ, ವಚನಸಾಹಿತ್ಯ, ದಾಸಸಾಹಿತ್ಯ, ಛಂದಸ್ಸು, ದ್ರಾವಿಡಭಾಷಾವಿಜ್ಞಾನ, ಸಂಸ್ಕೃತಿ, ಶಾಸನ, ಜಾನಪದ, ಕಾವ್ಯಮೀಮಾಂಸೆ, ಸಾಹಿತ್ಯವಿಮರ್ಶೆ, ಭಾಷಾಂತರ, ಸಾಹಿತ್ಯ ಚರಿತ್ರೆ, ಸಂಶೋಧನೆ, ಆಧುನಿಕ ಸಾಹಿತ್ಯ ಮುಂತಾದ ವಿಷಯಗಳಲ್ಲಿ ವಿಶೇಷ ತಜ್ಞರಾದವರು ಇಲ್ಲಿನ ಬೋಧಕ ಹಾಗೂ ಬೋಧಕೇತರ ಶೈಕ್ಷಣಿಕ ವರ್ಗದಲ್ಲಿರುವಂತೆಯೇ ಅನ್ಯ ಭಾಷಾ ನಿಪುಣರನ್ನೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಡೆದುಕೊಂಡಿದೆ. ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಭಾಷೆಗೆ ಸಂಬಂಧಿಸಿದಂತೆ ವಿಶೇಷ ಪರಿಣಿತರ ಸೇವೆ ಇಲ್ಲಿ ಸಂದಿದೆ. 

ಕಳೆದ ಮೂರೂವರೆ ದಶಕಗಳಿಂದ ಹಲವಾರು ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳು ಸಂಸ್ಥೆಯ ಆಶ್ರಯದಲ್ಲಿ ನಡೆದು ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತವಾಗಿಸುವಲ್ಲಿ ವಿಶೇಷವಾಗಿ ನೆರವಾಗಿವೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಜಾನಪದಗಳಿಗೆ ಸಂಬಂಧಪಟ್ಟಂತೆ ನಿರಂತರವಾಗಿ ನಡೆದ ಇಂಥ ಸಮ್ಮೇಳನ ಹಾಗೂ ವಿಚಾರಸಂಕಿರಣಗಳಲ್ಲಿ ಹೊರಬಂದ ಮೌಲಿಕವಾದ ಕೆಲವು ವಿಚಾರಗಳು ಪುಸ್ತಕರೂಪದಲ್ಲಿ ಹೊರಬಂದಿವೆ. ಸಂಸ್ಥೆಯಲ್ಲಿ ಈ ಹಿಂದೆ ಸೇವೆಸಲ್ಲಿಸಿದ ಹಾಗೂ ಸೇವೆಸಲ್ಲಿಸುತ್ತಿರುವ ಅನೇಕ ಪ್ರಾಧ್ಯಾಪಕ, ಸಂಶೋಧಕ ಮತ್ತು ಶೈಕ್ಷಣಿಕ ಉದ್ಯೋಗಿಗಳು ತಮ್ಮ ವಿಶಿಷ್ಟ ಸಾಧನೆ ಮತ್ತು ಕೊಡುಗೆಗಳಿಗಾಗಿ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಬಹುಮಾನಗಳನ್ನೂ ಪ್ರಶಸ್ತಿ-ಗೌರವಗಳನ್ನು ಗಳಿಸಿದ್ದಾರೆ. ಶೈಕ್ಷಣಿಕ ಸಿಬ್ಬಂದಿ ಕಾಲೇಜಿನ ವತಿಯಿಂದ ನಡೆಯುತ್ತಿರುವ ಕನ್ನಡ ಪುನರ್‍ಮನನ ಶಿಕ್ಷಣದ (ರಿಫ್ರೆಶರ್‍ಕೋರ್ಸ್) ಹೊಣೆಯನ್ನು ಸಂಸ್ಥೆಯ ಸಿಬ್ಬಂದಿ ನಿರ್ವಹಿಸುತ್ತಿದ್ದು ಇಂಥ ಶಿಬಿರಗಳು ಯಶಸ್ವಿಯಾಗಿ ನಡೆದಿವೆ.

ಇಂಥ ಸಂಸ್ಥೆಯಲ್ಲಿ ಇಲ್ಲಿಯವರೆಗೆ ನಿರ್ದೇಶಕರಾಗಿ ಸೇವೆಸಲ್ಲಿಸಿರುವ ಪ್ರಾಧ್ಯಾಪಕರ ಹೆಸರುಗಳು ಹೀಗಿವೆ: ದೇ.ಜವರೇಗೌಡ (1966-69), ಹಾ.ಮಾ.ನಾಯಕ (1969-84), ಎಚ್.ತಿಪ್ಪೇರುದ್ರಸ್ವಾಮಿ (1984-87), ಜೀ.ಶಂ.ಪರಮಶಿವಯ್ಯ (1987-89), ಸಿ.ಪಿ.ಕೃಷ್ಣಕುಮಾರ್ (1989-91), ಟಿ.ವಿ.ವೆಂಕಟಾಚಲಶಾಸ್ತ್ರೀ (1991-93), ಎಚ್.ಎಂ.ಚನ್ನಯ್ಯ (1993-95), ಕೆ.ಕೆಂಪೇಗೌಡ (1995-97), ಡಿ.ಕೆ.ರಾಜೇಂದ್ರ (1997-99), ಸಿ.ಪಿ.ಸಿದ್ಧಾಶ್ರಮ (11-1-1999ರಿಂದ 2-1-2001), ಅರವಿಂದ ಮಾಲಗತ್ತಿ (2-1-2001ರಿಂದ 1-1-2002), ಡಿ.ಕೆ.ರಾಜೇಂದ್ರ (1-1-2002ರಿಂದ   12-4-2002), ಸಿ.ಪಿ.ಸಿದ್ಧಾಶ್ರಮ, (13-4-2002ರಿಂದ 14-4-2004) ಅರವಿಂದ ಮಾಲಗತ್ತಿ (15-4-2004 ರಿಂದ 31-5-2006), ಹಿ.ಶಿ. ರಾಮಚಂದ್ರೇಗೌಡ (1-6-2006 ರಿಂದ 14-11-2007), ಆರ್.ವಿ.ಎಸ್. ಸುಂದರಂ (15-11-2007 ರಿಂದ 21-4-2008), ಅಂಬಳಿಕೆ ಹಿರಿಯಣ್ಣ (21-4-2008 ರಿಂದ 20-4-2010), ಕೆ.ಎನ್. ಗಂಗಾನಾಯಕ್ (21-4-2010 ರಿಂದ 20-4-2012), ಎನ್.ಎಂ. ತಳವಾರ (21-4-2012 ರಿಂದ 20-04-2014), ಆರ್.ರಾಮಕೃಷ್ಣ (21-04-2014 ರಿಂದ 20-04-2016), ಪ್ರೀತಿ ಶ್ರೀಮಂಧರ್ ಕುಮಾರ್ (21-04-2016 ರಿಂದ 20-04-2018). 

ಬೋಧನಾಂಗಗಳು: ಸಂಸ್ಥೆಯ ಬೋಧನಾಂಗದಲ್ಲಿ ಎರಡು ವರ್ಷದ ಕನ್ನಡ ಸ್ನಾತಕೋತ್ತರ ಶಿಕ್ಷಣ ಬಹಳ ಮುಖ್ಯವಾದುದು. ಜಾಗತೀಕರಣ, ಉದಾರೀಕರಣ, ಆಧುನೀಕರಣದೊಂದಿಗೆ ನಿಕಟ ಬಾಂಧವ್ಯ ಸಾದಿsಸುವ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ ಈಗ ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದ್ದು, ಉದ್ಯೋಗಕ್ಕಾಗಿ ಶಿಕ್ಷಣ, ಜ್ಞಾನಕ್ಕಾಗಿ ಶಿಕ್ಷಣ ಎನ್ನುವುದಕ್ಕೆಂದು ಇವೆರಡರ ಸಂಯೋಜನಾತ್ಮಕ ಮಧ್ಯಂತರ ಶಿಕ್ಷಣ ಮಾರ್ಗವನ್ನು ತರಬೇಕೆಂಬುದು ಪಠ್ಯಕ್ರಮ ರೂಪಿಸುವುದರ ಹಿಂದಿನ ಆಶಯ. ಸಂಶೋಧನೆ ಹಾಗೂ ಗಣಕಜ್ಞಾನದ ವಿಷಯಗಳನ್ನು ಪಠ್ಯದ ಭಾಗಗಳಾಗಿ ಅಳವಡಿಸಲಾಗಿದೆ.

ಭಾಷಾವಿಜ್ಞಾನ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಪ್ರಮುಖ ಅಧ್ಯಯನ ವಿಷಯಗಳಲ್ಲೊಂದಾಗಿದೆ. ಅಧ್ಯಯನ ಸಂಸ್ಥೆಯಲ್ಲಿ ಈ ವಿಷಯದಲ್ಲಿ ಎಂ.ಎ. ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. 1972ರಲ್ಲಿ ಎಂ.ಎ. ತರಗತಿ ಪ್ರಾರಂಭಗೊಂಡಿದೆ. ಸ್ನಾತಕೋತ್ತರ ಡಿಪ್ಲೊಮಾ ತರಗತಿ 1990ರಲ್ಲಿ ಪ್ರಾರಂಭವಾಯಿತು. ಈ ವಿಭಾಗದಲ್ಲಿ ಪಿಎಚ್.ಡಿ. ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಕನ್ನಡ ಕಲಿಕೆಗೆ ಬರುವ ಕನ್ನಡೇತರ ವಿದ್ಯಾರ್ಥಿಗಳಿಗಾಗಿ ಕನ್ನಡ ಸರ್ಟಿಫಿಕೇಟ್ ಶಿಕ್ಷಣದ ಪ್ರಾಯೋಗಿಕ ತರಗತಿಗಳಿಗಾಗಿ ಭಾಷಾವಿಜ್ಞಾನ ವಿಭಾಗದಲ್ಲಿ ಸುಸಜ್ಜಿತ ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿತ್ತು (1975). ಕನ್ನಡೇತರರು, ವಿದೇಶೀಯರು ಹಾಗೂ ಸಂಶೋಧಕರ ಭಾಷಾ ಅಧ್ಯಯನ ಮತ್ತು ಬೋಧನಾ ಸೌಲಭ್ಯದ ಸುಗಮತೆಯ ದೃಷ್ಟಿಯಿಂದ ಪ್ರಾರಂಭವಾದ ಈ ಭಾಷಾ ಪ್ರಯೋಗಾಲಯ ಮಹತ್ತ್ವದ್ದು. ಈಗ ಸಂಪೂರ್ಣವಾಗಿ ಆಧುನಿಕಗೊಂಡಿದೆ.

ಕರ್ನಾಟಕದಲ್ಲಿ ಜಾನಪದ ಅಧ್ಯಯನಕ್ಕೆ ಒಂದು ಸ್ಥಿರವಾದ ಬುನಾದಿಯನ್ನು ಪ್ರಪ್ರಥಮವಾಗಿ ಹಾಕಿಕೊಟ್ಟ ಕೀರ್ತಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸಲ್ಲುತ್ತದೆ. ಜಾನಪದ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಮನ್ನಣೆ ದೊರೆತದ್ದು 1966ರಲ್ಲಿ. ಆಗ ಕನ್ನಡ ಎಂ.ಎ. ಪಠ್ಯಕ್ರಮದಲ್ಲಿ ಜಾನಪದ ಅಧ್ಯಯನ ಸೇರ್ಪಡೆಗೊಂಡಿತು. ಜಾನಪದ ಅಧ್ಯಯನದ ಮಹತ್ತ್ವವನ್ನು ಮನಗಂಡು ಅದರ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಮನ್ನಣೆಯನ್ನು ದೊರಕಿಸಿಕೊಡಲು ಶ್ರಮಿಸಿದವರು ಆಗಿನ ನಿರ್ದೇಶಕರಾಗಿದ್ದ ದೇ.ಜವರೇಗೌಡರು. ಅವರೊಡನೆ ಜಾನಪದ ಅಧ್ಯಯನವನ್ನು ಬೆಳೆಸಲು ಹಾ.ಮಾ. ನಾಯಕ ಮತ್ತು ಜೀ.ಶಂ.ಪರಮಶಿವಯ್ಯನವರು ಶ್ರಮಿಸಿದರು. ಅನಂತರ ಜಾನಪದವನ್ನು ಐಚ್ಫಿಕ ವಿಷಯವಾಗಿ ಅಭ್ಯಾಸ ಮಾಡುವವರ ಮತ್ತು ಆಸಕ್ತರ ಅನುಕೂಲಕ್ಕಾಗಿ ಒಂದು ವರ್ಷದ ಸ್ನಾತಕೋತ್ತರ ಜಾನಪದ ಡಿಪ್ಲೊಮಾ ಶಿಕ್ಷಣವನ್ನೂ ಆರಂಬಿsಸಲಾಯಿತು (1972). ಜಾನಪದ ಅಧ್ಯಯನಕ್ಕೇ ಪ್ರತ್ಯೇಕವಾದ ಪೂರ್ಣಪ್ರಮಾಣದ ಜಾನಪದ ಎಂ.ಎ. ಶಿಕ್ಷಣವನ್ನು ಭಾರತದಲ್ಲೇ ಮೊತ್ತಮೊದಲ ಬಾರಿಗೆ ಆರಂಭಿಸಿದ್ದು 1974ರಲ್ಲಿ.

ದಕ್ಷಿಣ ಭಾರತವನ್ನು ಒಂದು ಸಮಗ್ರ ಘಟಕವನ್ನಾಗಿ ತೆಗೆದುಕೊಂಡು ಅಧ್ಯಯನ ಮಾಡುವ ದೃಷ್ಟಿಯಿಂದ ಪ್ರಾರಂಭಗೊಂಡ (1971-72) ಎರಡು ವರ್ಷಗಳ ದಕ್ಷಿಣ ಭಾರತೀಯ ಅಧ್ಯಯನ ಎಂ.ಎ. ಇಡೀ ರಾಷ್ಟ್ರದಲ್ಲೇ ಈ ಬಗೆಯ ಶಿಕ್ಷಣದಲ್ಲಿ ಇದು ಮೊದಲನೆಯದು. ಈ ಅಧ್ಯಯನ ಕೇವಲ ಇತಿಹಾಸ ಅಥವಾ ಸಾಹಿತ್ಯಕ್ಕೆ ಮೀಸಲಾಗಿರದೆ ದಕ್ಷಿಣ ಭಾರತೀಯ ಸಾಹಿತ್ಯಗಳು, ಅದಕ್ಕೆ ಸಂಬಂದಿsಸಿದ ಪಠ್ಯಗಳು, ಇತಿಹಾಸ, ಪ್ರಾಚೀನ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ, ತತ್ತ್ವಶಾಸ್ತ್ರ ಮತ್ತು ದ್ರಾವಿಡ ಭಾಷಾ ವಿಜ್ಞಾನ ಸೇರಿ, ದಕ್ಷಿಣ ಭಾರತೀಯ ಅಧ್ಯಯನ ಅರ್ಥಪೂರ್ಣ ಶೈಕ್ಷಣಿಕ ಶಿಸ್ತಾಗಿ ವಿಶಿಷ್ಟತೆಯನ್ನು ಪಡೆದಿದೆ.

ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ ಎಂ.ಎ. ಶಿಕ್ಷಣವನ್ನು (ಸ್ವ-ಆರ್ಥಿಕ ಯೋಜನೆ) ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನಕ್ಕೆ ಹೊಸ ಆಯಾಮವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಯಿತು. (20 -  20) ಭಾಷಾಂತರದ ಮಹತ್ತ್ವ ದಿನೇದಿನೇ ಹೆಚ್ಚುತ್ತಿರುವುದನ್ನು ಮನಗಂಡು 1967-68ರಲ್ಲಿ ಭಾಷಾಂತರದಲ್ಲಿ ಡಿಪೆÇ್ಲಮಾ ಶಿಕ್ಷಣವನ್ನು ಪ್ರಾರಂಬಿಸಲಾಯಿತು. ತರುವಾಯ ಭಾಷಾಂತರದಲ್ಲಿ ಎಂ.ಫಿಲ್ ಪದವಿ ಶಿಕ್ಷಣ ಜಾರಿಗೆ ಬಂದಿತು. ಭಾಷಾಂತರಕಾರರನ್ನು ಸಿದ್ಧಪಡಿಸುವಲ್ಲಿ ಇದು ಮುಖ್ಯ ಪಾತ್ರವಹಿಸಿತು. 

ಭಾರತೀಯ ಭಾಷೆಗಳು ಹಲವಾದರೂ ಭಾರತೀಯ ಸಾಹಿತ್ಯ ಒಂದೇ ಎಂಬ ಪರಿಕಲ್ಪನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಸಾಹಿತ್ಯದ ವಿವಿಧ ಮುಖಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಸ್ನಾತಕೋತ್ತರ ಭಾರತೀಯ ಸಾಹಿತ್ಯ ಡಿಪ್ಲೊಮಾವನ್ನು ಪ್ರಾರಂಬಿsಸಲಾಯಿತು (1970-71).ಯಾವುದೇ ಪದವಿಯಲ್ಲಿ ಉತ್ತೀರ್ಣರಾದವರು ಈ ಶಿಕ್ಷಣಕ್ಕೆ ಸೇರಲು ಅರ್ಹರು.

ಕನ್ನಡ ಮಾತೃಭಾಷೆಯಲ್ಲದ, ಶಿಕ್ಷಣದ ಯಾವ ಹಂತದಲ್ಲಿಯೂ ಕನ್ನಡವನ್ನು ಅಭ್ಯಾಸ ಮಾಡದಿರುವ ಕನಿಷ್ಠ ಪಕ್ಷ ಎಸ್‍ಎಸ್‍ಎಲ್‍ಸಿ. ಮಟ್ಟದಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗಾಗಿ ಕನ್ನಡ ಸರ್ಟಿಫಿಕೇಟ್ ಶಿಕ್ಷಣವನ್ನು ಪ್ರಾರಂಬಿಸಲಾಗಿದೆ (1968-69). ಕನ್ನಡ ಓದು ಬರೆಹಗಳಿಗೆ ಹಾಗೂ ಮಾತನಾಡುವುದಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕನ್ನಡ ಸಾಹಿತ್ಯವನ್ನು ಸ್ಥೂಲವಾಗಿ ಪರಿಚಯ ಮಾಡಿಕೊಡುವಂತೆ ಈ ಶಿಕ್ಷಣವನ್ನು ರೂಪಿಸಲಾಗಿದೆ. ಇದನ್ನು ಯಶಸ್ವಿಯಾಗಿ ಮುಗಿಸುವವರಿಗೆ ಒಂದು ಶೈಕ್ಷಣಿಕ ವರ್ಷ ಅವದಿsಯ ಕನ್ನಡ ಡಿಪ್ಲೊಮಾ ಶಿಕ್ಷಣ ನೀಡುವ ಮೂಲಕ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.

1968-69ರಲ್ಲಿ ಅಮೆರಿಕದ ಬಫೆಲೋ ಸ್ಟೇಟ್ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಅವರ ಶಿಕ್ಷಣದ ಅಂಗವಾಗಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ಅನ್ವಯ ಕನ್ನಡ ಕಲಿಯಲು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಬಂದಂದಿನಿಂದ ಕನ್ನಡ ಶಿಕ್ಷಣ ಪ್ರಾರಂಭವಾಯಿತು. ಅಂದಿನಿಂದ ವಿವಿಧ ಶೈಕ್ಷಣಿಕ ಅವಧಿಗಳಲ್ಲಿ ಅಮೆರಿಕ, ರಷ್ಯ ಮೊದಲಾದ ದೇಶಗಳಿಂದ ವಿದೇಶೀಯರು ಬಂದು ಕನ್ನಡ ಕಲಿಯುತ್ತಿದ್ದಾರೆ. ಆರು ತಿಂಗಳ ಅವದಿsಯಲ್ಲಿ ಅವರು ಸ್ವತಂತ್ರವಾಗಿ ಓದಲು, ಬರೆಯಲು, ಮಾತನಾಡಲು ಕಲಿಯುತ್ತಾರೆ.

1996-97ರಲ್ಲಿ ಕರ್ನಾಟಕ ಸರ್ಕಾರದ ಆಶಯದಂತೆ ಆಡಳಿತ ತರಬೇತಿ ಸಹಕಾರದೊಂದಿಗೆ ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್. ವರ್ಗದ ಪೆÇ್ರೀಬೇಷನರಿ ಅದಿsಕಾರಿಗಳಿಗಾಗಿ ಕರ್ನಾಟಕ ಸರ್ಕಾರ ನಡೆಸುವ ತತ್ಸಂಬಂಧವಾದ ಪರೀಕ್ಷೆಗಾಗಿ ಸರ್ಕಾರದ ಆರ್ಥಿಕ ನೆರವಿನಿಂದ ಸಂಸ್ಥೆಯ ವತಿಯಿಂದ ಕನ್ನಡ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ.

ಸಂಶೋಧನ ಸೌಲಭ್ಯ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಅಭ್ಯರ್ಥಿಗಳು ಕನ್ನಡ ಭಾಷಾಸಾಹಿತ್ಯ, ಭಾಷಾವಿಜ್ಞಾನ, ಜಾನಪದ, ಭಾಷಾಂತರ, ದಕ್ಷಿಣ ಭಾರತೀಯ ಅಧ್ಯಯನಗಳಿಗೆ ಸಂಬಂದಿsಸಿದಂತೆ ಹಾಗೂ ಅಂತರಶಾಸ್ತ್ರೀಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಬೋಧನ ಸಿಬ್ಬಂದಿಯ ಹಾಗೂ ಶೈಕ್ಷಣಿಕ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಗಾಗಿ ಸಂಶೋಧನೆ ನಡೆಸಲು ಅವಕಾಶವಿದೆ. ಸಂಶೋಧನ ಅಭ್ಯರ್ಥಿಗಳು ಖಾಸಗಿಯಾಗಿ ಕೂಡ ವಿವಿಧ ವಿಷಯಗಳನ್ನು ಕುರಿತಂತೆ ಪಿಎಚ್.ಡಿ.ಗಾಗಿ ಸಂಶೋಧನೆ ನಡೆಸಲು ಅವಕಾಶವಿದೆ. ಸಂಸ್ಥೆಯಲ್ಲಿ ಕುವೆಂಪು ಕಾವ್ಯಾಧ್ಯಯನ ಪೀಠ, ಶ್ರೀ ಬಸವೇಶ್ವರ ಸಾಮಾಜಿಕ ಪರಿವರ್ತನ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಸ್ಥಾಪಿತಗೊಂಡಿದ್ದು (2012-13) ನಿವೃತ್ತ ವಿದ್ವಾಂಸರು ಈ ಪೀಠಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕವಾಗುತ್ತಾರೆ. ಇದೀಗ ಶ್ರೀ ಪಿ.ಆರ್. ತಿಪ್ಪೇಸ್ವಾಮಿ ಪೀಠ ಕೂಡ ಸ್ಥಾಪನೆಯಾಗಿದೆ (2017-2018).

ಗಣಕಶಾಖೆ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಲ್ಲ ವಿಭಾಗಗಳ ಗಣಕೀಕರಣದ ಮೊದಲ ಹಂತದ ಕೆಲಸಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳಿಗಾಗಿ ಪಠ್ಯದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಗಣಕದ ವಿಷಯವನ್ನು ಕಡ್ಡಾಯವಾಗಿ ಸೇರಿಸಲಾಗಿದ್ದು ಬೋಧನಾಂಗಗಳಲ್ಲಿ ಏಕರೂಪತೆ ಮತ್ತು ಸಂಯುಕ್ತತೆಯನ್ನು ಕಾಪಾಡಲಾಗಿದೆ.

ಭೌತಿಕಸ್ವರೂಪ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಅಪರೂಪವಾದ ಕಟ್ಟಡ. ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 35 ಕೊಠಡಿಗಳಿವೆ. ಸಂಸ್ಥೆಯಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ಇಲ್ಲಿ ಸುಮಾರು 35 ಸಾವಿರ ಗ್ರಂಥಗಳಿವೆ. ಕೇವಲ ಕನ್ನಡ ವಿಷಯಕ್ಕೆ ಸಂಬಂದಿsಸಿರದೆ ಬಗೆಬಗೆಯ ವಿಶ್ವಕೋಶಗಳೂ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಭಾಷಾ ವಿಷಯಗಳ ಗ್ರಂಥಗಳೂ ಸೇರ್ಪಡೆಗೊಂಡಿವೆ. ಸಭೆಸಮಾರಂಭಗಳನ್ನು ನಡೆಸಲು ವಿಬಿsನ್ನ ಸ್ವರೂಪದ ಮೂರು ಸಂರಚನೆಗಳಿವೆ. ಐವತ್ತು ಆಸನಗಳಿರುವ ಸಮಿತಿ ಕೊಠಡಿ, ನೂರೈವತ್ತು ಆಸನಗಳಿರುವ ಸಭಾಂಗಣ, ನೂರು ಆಸನಗಳ ಸಭಾಮನೆ ಇವೆ. ಇವುಗಳಲ್ಲಿ ವಿಚಾರಸಂಕಿರಣ, ವಿಚಾರಗೋಷಿವಿ, ವಿಶೇಷ ಉಪನ್ಯಾಸ,  ಶಿಬಿರಗಳು ಜರಗುತ್ತವೆ.

ಪ್ರಕಟಣೆಗಳು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಇಲ್ಲಿಯ ವರೆಗೆ ಒಟ್ಟು 536 ಕೃತಿಗಳು ಪ್ರಕಟವಾಗಿವೆ. ಅನುವಾದಿತ ಕೃತಿಗಳು 230, ಸಂಪಾದಿತ ಕೃತಿಗಳು 131, ಜಾನಪದಕ್ಕೆ ಸಂಬಂದಿsಸಿದ ಕೃತಿಗಳು 73, ದಾಸಸಾಹಿತ್ಯಕ್ಕೆ ಸಂಬಂದಿsಸಿದಂತೆ 13, ಇತರ ಪ್ರಕಟಣೆಗಳು 44, ಇಂಗ್ಲಿಷ್ ಕೃತಿಗಳು 10 -ಹೀಗೆ ಪ್ರಕಟಣೆಯಲ್ಲಿ ಸಂಸ್ಥೆ ತನ್ನದೇ ಆದ ಛಾಪನ್ನು ಮೂಡಿಸಿದೆ.

ಕನ್ನಡ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶ ಯೋಜನೆ: ಕನ್ನಡ ವಿಶ್ವ ಕೋಶ ಮೈಸೂರು ವಿಶ್ವವಿದ್ಯಾನಿಲಯದ ಹಾಗೂ ಕನ್ನಡದ ಪ್ರತಿಷ್ಠಿತ ಯೋಜನೆಗಳಲ್ಲೊಂದು. ಸಾಮಾನ್ಯ ವಿಶ್ವಕೋಶ 14 ಸಂಪುಟಗಳ ಯೋಜನೆ. ಈ ಯೋಜನೆಯಂತೆ ಇದುವರೆಗೆ 14 ಸಂಪುಟಗಳು ಬಂದಿವೆ (2004). ಈಗ ಸಂಪುಟಗಳ ಪರಿಷ್ಕಾರ ಮತ್ತು ಪುಸ್ತಕ ಮುದ್ರಣ ಕಾಯ ನಡೆಯುತ್ತಿದೆ.

ಕನ್ನಡ ವಿಷಯ ವಿಶ್ವಕೋಶ: ಸಾಮಾನ್ಯ ವಿಶ್ವಕೋಶಗಳು ಗಳಿಸಿದ ಯಶಸ್ಸನ್ನು ಪರಿಗಣಿಸಿ 30 ಸಂಪುಟಗಳಲ್ಲಿ ವಿಷಯ ವಿಶ್ವಕೋಶಗಳನ್ನು ಹೊರತರಲು ಬೃಹತ್ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ವಿಷಯದ ಆಯ್ಕೆ, ನಿರೂಪಣೆ, ತಾಂತ್ರಿಕತೆಗಳ ದೃಷ್ಟಿಯಿಂದ ಸಾಮಾನ್ಯ ವಿಶ್ವಕೋಶ ಹಾಗೂ ವಿಷಯ ವಿಶ್ವಕೋಶಗಳಲ್ಲಿ ಕೆಲವು ಬಿsನ್ನತೆಗಳನ್ನು ಗುರುತಿಸಬಹುದು. ಸಾಮಾನ್ಯ ವಿಶ್ವಕೋಶ ಎಲ್ಲ ವರ್ಗದ ಆಸಕ್ತಿಯ ವಾಚಕರನ್ನು ಗಮನದಲ್ಲಿಟ್ಟುಕೊಂಡರೆ, ವಿಷಯ ವಿಶ್ವಕೋಶ ಆಯಾ ವಿಷಯಗಳಲ್ಲಿ ಆಸಕ್ತರನ್ನು ಮತ್ತು ಪರಿಣತರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳುತ್ತದೆ. 16 ವಿಜ್ಞಾನ ವಿಷಯಗಳು, 14 ಮಾನವಿಕ ವಿಷಯಗಳು -ಹೀಗೆ ಒಟ್ಟು ಸಂಪುಟಗಳನ್ನು ಸಿದ್ಧಪಡಿಸಲು ಸು.99 ಲಕ್ಷ ರೂಪಾಯಿಗಳನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿತ್ತು. ಈ ಹೊಣೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗೇ ವಹಿಸಿಕೊಟ್ಟಿತ್ತು. ಕನ್ನಡ ವಿಷಯ ವಿಶ್ವಕೋಶದ ಮೊದಲ ಸಂಪುಟ ಕರ್ನಾಟಕ 1979ರಲ್ಲಿ ಪ್ರಕಟವಾಯಿತು. ಇದರ ಪರಿಷ್ಕಾರ ಹಾಗೂ ಪುನರ್ ಮುದ್ರಣ ಕಾರ್ಯವೂ ಎರಡು ಸಂಪುಟಗಳು ಪ್ರಕಟವಾಗಿವೆ. 2016ರಲ್ಲಿ ಕರ್ನಾಟಕ ವಿಷಯ ವಿಶ್ವಕೋಶದ ಇಂಗ್ಲಿಷ್ ಅನುವಾದವು ಪ್ರಕಟವಾಗಿದೆ. ಜೊತೆಗೆ ಜಾನಪದ, ಪ್ರಾಣಿವಿಜ್ಞಾನ, ಇತಿಹಾಸ ಮತ್ತು ಪುರಾತತ್ವ, ಭೂಗೋಳ ವಿಜ್ಞಾನ  ಎಂಬ ವಿಷಯ ವಿಶ್ವಕೋಶ ಸಂಪುಟಗಳು ಪ್ರಕಟವಾಗಿವೆ. ಮಾಹಿತಿ ತಂತ್ರಜ್ಞಾನ, ವೈದ್ಯವಿಜ್ಞಾನ, ಭೂವಿಜ್ಞಾನ, ಮಾನವಶಾಸ್ತ್ರ, ಲಲಿತಕಲೆ - ಈ ಸಂಪುಟಗಳ ಪ್ರಕಟಣೆಯ ಕಾರ್ಯ ಪ್ರಗತಿಯಲ್ಲಿದೆ. 

ಎಪಿಗ್ರಾಫಿಯ ಕರ್ನಾಟಿಕ: ಕನ್ನಡನಾಡಿನಲ್ಲಿ ಸುಮಾರು ನಲವತ್ತು ಸಾವಿರ ಶಾಸನಗಳಿರಬಹುದೆಂದು ಅಂದಾಜು ಮಾಡಲಾಗಿದೆ. ‘ಎಪಿಗ್ರಾಫಿಯ ಕರ್ನಾಟಿಕ’ ಹಳೆಯ ಮೈಸೂರು ಮತ್ತು ಕೊಡಗು ರಾಜ್ಯಗಳಲ್ಲಿ ಲಭ್ಯವಾದ ಶಾಸನಗಳನ್ನು ಜಿಲ್ಲಾವಾರು ಸಂಕಲಿಸಿ, ಸಂಪಾದಿಸಿ, ಪ್ರಕಟಿಸಿದ ಸಂಪುಟಗಳಿಗೆ ನೀಡಲಾದ ಒಂದು ಶೀರ್ಷಿಕೆ. ಪಾಶ್ಚಾತ್ಯ ವಿದ್ವಾಂಸರಾದ ಬೆಂಜಮಿನ್ ಲೂಯಿ ರೈಸ್ 1984ರಿಂದ 1906ರ ಅವದಿsಯಲ್ಲಿ ಹನ್ನೆರಡು ಬೃಹತ್ ಸಂಪುಟಗಳನ್ನು ಹೊರತಂದರು. ಅವರು ಒಟ್ಟು 8669 ಶಾಸನಗಳನ್ನು ಲಿಪ್ಯಂತರ, ಸಂಕ್ಷಿಪ್ತ ಭಾಷಾಂತರ ಮತ್ತು ಪೀಠಿಕೆಗಳೊಡನೆ ಪ್ರಕಟಿಸಿದರು. ಅನಂತರ ಸುಮಾರು ಐದು ದಶಕಗಳಲ್ಲಿ ಸು.5000 ಶಾಸನಗಳು ಅನ್ವೇಷಿತವಾದವು. ಇವು ಎಂ.ಎ.ಆರ್. ವಾರ್ಷಿಕ ವರದಿಗಳಲ್ಲಿಯೂ ಎಪಿಗ್ರಾಫಿಯ ಕರ್ನಾಟಿಕ ಅನುಬಂಧ ಸಂಪುಟಗಳಲ್ಲಿಯೂ ಪ್ರಕಟಗೊಂಡವು. ಇವೆಲ್ಲವನ್ನೂ ಒಳಗೊಂಡಂತೆ ಪರಿಷ್ಕರಣದ ಕೆಲಸವನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಲಾಯಿತು. ಪರಿಷ್ಕರಣಕಾರ್ಯ ಪ್ರಗತಿಯಲ್ಲಿದ್ದು ಈಗ 12 ಸಂಪುಟಗಳು ಪ್ರಕಟವಾಗಿವೆ. ಉಳಿದ ಸಂಪುಟಗಳ ಕಾರ್ಯ ನಡೆದಿದೆ (ನೋಡಿ: ಎಪಿಗ್ರಾಫಿಯ ಕರ್ನಾಟಿಕ).

ಸಂಪಾದನ ವಿಭಾಗ: ಪ್ರಾಚೀನ ಹಸ್ತಪ್ರತಿಗಳು ಯಾವುದೇ ನಾಡಿನ ಅಮೂಲ್ಯ ಆಸ್ತಿ; ಅವು ಆ ಜನಾಂಗದ ಸಾವಿರಾರು ವರ್ಷಗಳ ಸಂಸ್ಕøತಿ ಮತ್ತು ಸಾಹಿತ್ಯ ಸಂಪತ್ತಿನ ವಾಹಕಗಳು. ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳ ಕನ್ನಡ ಸಾಹಿತ್ಯವಾಹಿನಿ ಹರಿದುಬಂದಿರುವುದು ಕೂಡ ಈ ಹಸ್ತಪ್ರತಿಗಳಿಂದಲೇ. ಇವುಗಳಿಲ್ಲದೇ ಹೋಗಿದ್ದಿದ್ದರೆ ನಮ್ಮ ಪ್ರಾಚೀನ ಸಾಹಿತ್ಯ ಯುಗ ಕಗ್ಗತ್ತಲೆಯ ಯುಗವಾಗಿಯೇ ಉಳಿದಿರುತ್ತಿತ್ತು.

1891ರಲ್ಲಿ ಬಿ.ಎಲ್.ರೈಸ್ ಅವರ ನೇತೃತ್ವದಲ್ಲಿ ಮೈಸೂರು ಪ್ರಾಚ್ಯಕೋಶಾಗಾರ ಪ್ರಾರಂಭವಾಯಿತು. ಇಲ್ಲಿ ಸಂಸ್ಕೃತ, ಕನ್ನಡ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಅಧ್ಯಯನ ನಡೆಯತೊಡಗಿತು. ಜೊತೆಗೆ ಗ್ರಂಥ ಸಂಪಾದನ ಕಾರ್ಯವನ್ನೂ ಮಾಡತೊಡಗಿದರು. ಸರ್ಕಾರಿ ಇಲಾಖೆಯಾಗಿದ್ದ ಪ್ರಾಚ್ಯ ಕೋಶಾಗಾರ 1956ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಂಡಿತು. ಅನಂತರ ಪ್ರಾಚ್ಯ ವಿದ್ಯಾಸಂಶೋಧನಾಲಯ ಎಂಬ ಹೆಸರಿನಲ್ಲಿ ಸಂಸ್ಥೆಯ ಕೆಲಸ ಮುಂದುವರಿಯಿತು. ಆಗ ಕನ್ನಡ ಮತ್ತು ಸಂಸ್ಕೃತ à²µà²¿à²­à²¾à²—ಗಳು ಒಟ್ಟಿಗೆ ಇದ್ದುವು.

ಕನ್ನಡದ ಕೆಲಸಗಳೆಲ್ಲ ಒಂದೇ ಸೂರಡಿಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಮತ್ತು ಪರಸ್ಪರ ಸಂಬಂಧರಹಿತವಾಗಿದ್ದ ಬಿsನ್ನಾಂಗಗಳನ್ನು ಒಂದೆಡೆ ಕೂಡಿಸಿ ಸಾವಯವ ಸಂಬಂಧವನ್ನು ಕಲ್ಪಿಸುವ ಉದ್ದೇಶದಿಂದ ಪ್ರಾಚ್ಯವಿದ್ಯಾ ಸಂಶೋಧನಾಲಯದ ಕನ್ನಡ ಹಸ್ತಪ್ರತಿ ವಿಭಾಗವನ್ನು ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿತವಾದ ಮೇಲೆ ಸಂಸ್ಕೃತದಿಂದ ಬೇರ್ಪಡಿಸಿ ಈ ಸಂಸ್ಥೆಯಲ್ಲಿ ಸೇರಿಸಲಾಯಿತು (1966). ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲ್ಪಟ್ಟು, ವಿಲೀನಗೊಂಡ ಬಳಿಕ ಸಂಪಾದನ ವಿಭಾಗ ಎಂಬ ಹೆಸರು ಪಡೆದು ಸಂಸ್ಥೆಯ ಪ್ರಧಾನ ವಿಭಾಗವಾಗಿದೆ.

ಪ್ರಾಚೀನ ಕನ್ನಡ ಹಸ್ತಪ್ರತಿಗಳ ಸಂಗ್ರಹಣೆ, ಸಂರಕ್ಷಣೆ, ಸಂಪಾದನೆ ಮತ್ತು ಪ್ರಕಟಣೆ ಸಂಪಾದನ ವಿಭಾಗದ ಕಾರ್ಯ. ಇಲ್ಲಿಯ ವಿದ್ವಾಂಸರು ಸಂಪಾದನಕಾರ್ಯದ ಜೊತೆಜೊತೆಯಲ್ಲಿಯೇ ಹಸ್ತಪ್ರತಿಗಳ ಸಂಗ್ರಹಣೆಗಾಗಿ ವ್ಯಾಪಕವಾದ ಕ್ಷೇತ್ರಕಾರ್ಯ ಕೈಗೊಂಡು ನಾಡಿನಲ್ಲೆಲ್ಲ ಸಂಚರಿಸಿ ಅವನ್ನು ಸಂಗ್ರಹಿಸಿ ತಂದು ವಿಭಾಗದ ಹಸ್ತಪ್ರತಿ ಭಂಡಾರವನ್ನು ತುಂಬುತ್ತ ಬಂದಿದ್ದಾರೆ. ಹೀಗಾಗಿ ಸಂಪಾದನ ವಿಭಾಗದ ಹಸ್ತಪ್ರತಿ ಭಂಡಾರ ಅಧಿಕ ಸಂಖ್ಯೆಯ ಹಾಗೂ ವೈವಿಧ್ಯಮಯ ಹಸ್ತಪ್ರತಿಗಳನ್ನು ಪಡೆದುಕೊಂಡು ಶ್ರೀಮಂತವಾಗಿದೆ. 19ನೆಯ ಶತಮಾನದಲ್ಲಿ ಕರ್ನಲ್ ಮೆಕೆಂಜಿಯಿಂದ ಆರಂಭವಾಗಿ ಬಿ.ಎಲ್.ರೈಸ್ ಮತ್ತು ಆರ್.ನರಸಿಂಹಾಚಾರ್ಯ ಮುಂತಾದವರು ಇಲ್ಲಿಯವರೆಗೆ ಸಂಗ್ರಹಿಸಿರುವ ಸು.10,000 ಹಸ್ತಪ್ರತಿಗಳು ಈ ಭಂಡಾರದಲ್ಲಿವೆ. ಅಲ್ಲದೆ ಸು.1,300 ಮೈಕ್ರೊ ಫಿಲ್ಮ್ ಪ್ರತಿಗಳು ಕೂಡ ಇವೆ. ಈ ಪ್ರತಿಗಳಲ್ಲಿ ಓಲೆಪ್ರತಿಗಳು, ಕಾಗದದ ಪ್ರತಿಗಳು, ಕಡತಗಳು ಮತ್ತು ಉದ್ಧರಣೆಯ ಪಟಲಗಳಿವೆ. ಇವುಗಳಲ್ಲಿ ರನ್ನ ಕವಿಯ ಗದಾಯುದ್ಧ, ಎರಡನೆಯ ನಾಗವರ್ಮನ ವರ್ಧಮಾನ ಪುರಾಣ, ಸಂಸ್ಕೃತಭಾಷೆ ಮತ್ತು ಮಲಯಾಳಂ ಲಿಪಿಯಲ್ಲಿ ಬರೆದಿರುವಂಥ ಕನ್ನಡ ವ್ಯಾಕರಣ ಶಾಸ್ತ್ರವನ್ನು ಹೇಳುವ ನಾಗವರ್ಮನ ಭಾಷಾಭೂಷಣ, ಹಸ್ತಪ್ರತಿಯ ಪ್ರತಿಯೊಂದು ಪುಟದ ನಾಲ್ಕೂ ಅಂಚುಗಳಲ್ಲಿ ವಿವಿಧ ಬಣ್ಣಗಳ ಹೂವುಗಳನ್ನು ಬಿಡಿಸಿರುವ ಬಸವಪುರಾಣ, ಕಾಲದ ದೃಷ್ಟಿಯಿಂದ ಕುಮಾರವ್ಯಾಸನಿಗೆ ತೀರ ಹತ್ತಿರವಾದ, 1544ರಲ್ಲಿ ಪ್ರತಿ ಮಾಡಲಾದ ಗದುಗಿನ ಭಾರತ, ಪಗಡೆಯಾಟ, ಅಶ್ವಶಾಸ್ತ್ರ ಮುಂತಾದ ಗ್ರಂಥಗಳ ಹಸ್ತಪ್ರತಿಗಳು ವಿಶಿಷ್ಟವಾಗಿವೆ. ಇವಲ್ಲದೆ 1852ರಲ್ಲಿ ಮಂಗಳೂರಿನ ಬಾಸೆಲ್ ಮಿಷನ್ನಿನಲ್ಲಿ ಮುದ್ರಣಗೊಂಡ ಕನ್ನಡ ಗಾದೆಗಳು ಕೃತಿಯ ಕಲ್ಲಚ್ಚಿನ ಪ್ರತಿ, ಇತ್ತೀಚಿನ ಅಳಿಯ ಲಿಂಗರಾಜನ ಪ್ರಭಾವತೀಪರಿಣಯ ಕಲಾತ್ಮಕ ಬರೆವಣಿಗೆಯ ಪ್ರತಿಗಳು ಮುಂತಾದ ವೈವಿಧ್ಯಮಯ ಹಸ್ತಪ್ರತಿಗಳನ್ನು ಈ ಭಂಡಾರ ಒಳಗೊಂಡಿದೆ. ವಸ್ತುವಿನ ದೃಷ್ಟಿಯಿಂದ ಇಲ್ಲಿ ಕಾವ್ಯ, ಇತಿಹಾಸ, ಪುರಾಣ, ವಿವಿಧಶಾಸ್ತ್ರವಿಷಯಗಳಾದ ವ್ಯಾಕರಣ, ಛಂದಸ್ಸು, ನಿಘಂಟು, ಅಲಂಕಾರ, ಜ್ಯೋತಿಷ, ಭಾಷಾಶಾಸ್ತ್ರ, ವೈದ್ಯಶಾಸ್ತ್ರ, ಯೋಗ, ಕಾಮಶಾಸ್ತ್ರ, ಅಶ್ವಶಾಸ್ತ್ರ, ಶಕುನಶಾಸ್ತ್ರ, ಮುಂತಾದವನ್ನೊಳಗೊಂಡ ಪ್ರತಿಗಳೂ ಸಂಕಲನ ಗ್ರಂಥಗಳೂ ನಾಟಕಗಳೂ -ಹೀಗೆ ಬಗೆಬಗೆಯ ಹಸ್ತಪ್ರತಿಗಳಿವೆ. ಇವೆಲ್ಲ ಜೈನ, ವೀರಶೈವ, ವೈದಿಕ ಮೊದಲಾದ ಧರ್ಮಕ್ಕೆ ಸೇರಿದವಾಗಿವೆ. ಸಂಗ್ರಹಿಸಿದ ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಕೂಡ ಅಷ್ಟೇ ಅಗತ್ಯವಾದ ಮತ್ತು ಬಲು ಮುಖ್ಯವಾದ ಕಾರ್ಯ. ಹಾಗಾಗಿ ಇಲ್ಲಿ ಅತ್ಯಾಧುನಿಕ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಹಸ್ತಪ್ರತಿಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಮೈಕ್ರೊ ಫಿಲಂ ಮಾಡಿದ ಅಪರೂಪದ ಹಸ್ತಪ್ರತಿಗಳನ್ನು ಓದುವುದಕ್ಕಾಗಿ ಇಲ್ಲಿ ಮೈಕ್ರೊ ಫಿಲ್ಮ್ ರೀಡರ್ ಸೌಲಭ್ಯವೂ ಇದೆ. ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಯನ್ನೂ (9 ಸಂಪುಟಗಳು; 1962-81) ಒಂದು ಮೈಕ್ರೊಪಿsಲ್ಮ್ ಸೂಚಿಯನ್ನೂ (1989) ಪ್ರಕಟಿಸಲಾಗಿದೆ.

ಹರಿದಾಸ ಸಾಹಿತ್ಯ ಯೋಜನೆ: ಸಂಪಾದನ ವಿಭಾಗದ ಒಂದು ಉಪ ಶಾಖೆಯಾಗಿ ಇದು ಕೆಲಸ ಮಾಡುತ್ತಿದೆ. ಈ ಯೋಜನಾ ವಿಭಾಗದಿಂದ ಶಾಸ್ತ್ರೀಯ ಸಂಪಾದನ ಕಾರ್ಯದ ನಾಂದಿಯಾಯಿತು. ಅಂತೆಯೇ ಇದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ 1963ರಲ್ಲಿ ಯೋಜನೆ ಸಿದ್ಧವಾಗಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಸು.3,00,000 ರೂಪಾಯಿಗಳ ನೆರವಿನೊಡನೆ 1968ರ ಜುಲೈ ತಿಂಗಳಿನಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇದು ಪ್ರಾರಂಭವಾಯಿತು. ಹರಿದಾಸ ಸಾಹಿತ್ಯಕ್ಷೇತ್ರದಲ್ಲಾಗಲೇ ಸಾಕಷ್ಟು ಕೆಲಸ ಮಾಡಿದ್ದ ಜಿ.ವರದರಾಜರಾಯರು (ನೋಡಿ) ಈ ಯೋಜನೆಯ ಮೇಲ್ವಿಚಾರಕರಾಗಿ ನಿಯೋಜಿತರಾಗಿದ್ದರು.

ವಾಕ್ಪರಂಪರೆಯಲ್ಲೇ ಉಳಿದಿದ್ದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಹರಿದಾಸರು ಹಾಡಿರುವ ಸಾವಿರಾರು ಕೀರ್ತನೆಗಳನ್ನು ಬರೆದಿಟ್ಟುಕೊಂಡಿದ್ದ ಆಸಕ್ತರಿಂದ ಈ ವಿಭಾಗದ ವಿದ್ವಾಂಸರು ನಾಡಿನ ಮೂಲೆಮೂಲೆಗಳಲ್ಲಿ ಸಂಚರಿಸಿ, ಕ್ಷೇತ್ರಕಾರ್ಯದ ಮೂಲಕ ಜನರ ಮನವೊಲಿಸಿ ಅಂತಹ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕೆಲಸ ಮಾಡಿದರು. ಕಾಗದದ, ಓಲೆಯ ಹಾಗೂ ಹಳೆಯ ಮುದ್ರಿತ ಪ್ರತಿಗಳು ನೂರಾರು ಸಂಖ್ಯೆಯಲ್ಲಿ ಸಂಗ್ರಹವಾದವು. ಅಪರೂಪದ ಹಾಡುಗಾರರನ್ನು ಹುಡುಕಿ ಕೀರ್ತನೆಗಳನ್ನು ಹಾಡುವ ಸಂಪ್ರದಾಯ ಹೇಗೆ ಉಳಿದುಬಂದಿದೆ ಎಂಬುದನ್ನು ಅಭ್ಯಾಸಮಾಡುವ ಸಲುವಾಗಿ ನೂರಾರು ಕೀರ್ತನೆಗಳನ್ನು ಹಾಡಿಸಿ ಧ್ವನಿಮುದ್ರಿಸಿಕೊಳ್ಳಲಾಯಿತು. ವೈಯಕ್ತಿಕವಾಗಿ ಕೆಲವು ವಿದ್ವಾಂಸರು ಹಸ್ತಪ್ರತಿಗಳನ್ನು ದಾನವಾಗಿಯೂ ಕೊಟ್ಟಿದ್ದಾರೆ. ಈ ಹಸ್ತಪ್ರತಿಗಳಲ್ಲಿ ದೊರೆತ ಕೀರ್ತನೆಗಳನ್ನು ವಿಂಗಡಿಸಿ, ಶಾಸ್ತ್ರೀಯ, ಗ್ರಂಥಸಂಪಾದನೆಯ ಕ್ರಮವನ್ನನುಸರಿಸಿ ದಾಸರ ಅದಿsಕೃತ ಪಠ್ಯಗಳನ್ನು ಸಿದ್ಧಪಡಿಸಿಕೊಡುವ ಗುರುತರ ಜವಾಬ್ದಾರಿಯನ್ನು ಸಂಸ್ಥೆ ಹೊತ್ತು ನಿರ್ವಹಿಸುತ್ತಿದೆ. ಹೀಗೆ ಸಿದ್ಧವಾದ ಸಾಹಿತ್ಯವನ್ನು ವಿಷಯ, ಗಾತ್ರಗಳಿಗನುಗುಣವಾಗಿ ಬೇರೆ ಬೇರೆ ಸಂಪುಟಗಳಾಗಿ ಪ್ರಕಟಿಸುವುದು, ಪ್ರತಿಯೊಂದು ಸಂಪುಟಕ್ಕೂ ವಿದ್ವತ್ಪರಿಕರಗಳಾದ ಕವಿಕಾವ್ಯ ಸಂಬಂದಿs ವಿಮರ್ಶಾತ್ಮಕ ಪೀಠಿಕೆ, ಅಭ್ಯಾಸಕ್ಕೆ ಅನುಕೂಲವಾಗುವ ಶಬ್ದಾರ್ಥಸೂಚಿ, ಲಘುಟಿಪ್ಪಣಿಗಳು, ಆಧಾರಗಳು, ಸಹಾಯಕ ಸಾಹಿತ್ಯದೊಂದಿಗೆ ಅನುಬಂಧ ಸಿದ್ಧಪಡಿಸಿ ಹರಿದಾಸ ಸಾಹಿತ್ಯವನ್ನು ಹೊರತರಲಾಗಿದೆ. 

ಭಾಷಾಂತರ ಮತ್ತು ಪಠ್ಯಪುಸ್ತಕ ವಿಭಾಗ: ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಜಾರಿಗೆ ತರಲು ಸಹಾಯಕವಾಗುವ ದೃಷ್ಟಿಯಿಂದ ಪಠ್ಯಪುಸ್ತಕ ಮತ್ತು ಆಕರ ಗ್ರಂಥಗಳನ್ನು ಕನ್ನಡದಲ್ಲಿ ತರುವ ಉದ್ದೇಶದಿಂದ 1966-67ರಲ್ಲಿ ಈ ವಿಭಾಗವನ್ನು ಸ್ಥಾಪಿಸಲಾಯಿತು. 1969ರಲ್ಲಿ ಕೇಂದ್ರ ಸರ್ಕಾರ ಮಂಜೂರು ಮಾಡಿದ ಧನಸಹಾಯದಿಂದ ಕೆಲಸಕ್ಕೆ ಹೆಚ್ಚಿನ ಚಾಲನೆ ದೊರೆಯಿತು. ಈವರೆಗೆ ಈ ವಿಭಾಗ ನೂರಾರು ಪುಸ್ತಕಗಳನ್ನು ಹೊರತಂದಿದೆ. ಇವುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಗಳಿಗೆ ಸಂಬಂದಿsಸಿದ ಪಠ್ಯಪುಸ್ತಕಗಳು, ಪರಾಮರ್ಶನ ಗ್ರಂಥಗಳು ಮತ್ತು ಆಕರ ಗ್ರಂಥಗಳಿವೆ.

ಇಷ್ಟೇ ಅಲ್ಲದೆ ಕರ್ನಾಟಕ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೊಳಿಸಲು ಅಗತ್ಯವಾದ ಎಲ್ಲ ನೆರವನ್ನೂ ಈ ವಿಭಾಗ ನೀಡುತ್ತಿದೆ ಹಾಗೂ ಭಾರತ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪಾರಿಭಾಷಿಕ ಪದಗಳ ಪರಿಷತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳನ್ನು ತರಲು ಹಾಕಿಕೊಂಡ ಯೋಜನೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕೆಲಸಗಳನ್ನು ಈ ವಿಭಾಗ ಮಾಡಿಕೊಟ್ಟಿದೆ. ಪಿ.ವಿ.ಕಾಣೆಯವರ ಧರ್ಮಶಾಸ್ತ್ರದ ಇತಿಹಾಸ, ಭಂಡಾರಕರ್ ಪ್ರಾಚ್ಯ ಸಂಶೋಧನ ಸಂಸ್ಥೆಯ ಮಹಾಭಾರತದ ಸಟೀಕಾ ಆವೃತ್ತಿ ಹಾಗೂ ಕಾನೂನು ಪುಸ್ತಕಗಳ ಕನ್ನಡ ಆವೃತ್ತಿ ಪ್ರಕಟಣಾ ಯೋಜನೆಯಡಿ ಹಲವಾರು ಕೃತಿಗಳನ್ನು ಪ್ರಕಟಿಸಲಾಗಿದೆ. 

ಜಾನಪದ ಸಂಶೋಧನೆ: 1966ರಲ್ಲಿ ಜಾನಪದ ವಿಷಯವನ್ನು ಕನ್ನಡ ಸ್ನಾತಕೋತ್ತರ ವಿಷಯಗಳಲ್ಲಿ ಐಚ್ಫಿಕ ವಿಷಯವಾಗಿ ಸೇರಿಸಿದ್ದರ ಪರಿಣಾಮವಾಗಿ ಈ ವಿಷಯದ ಕುರಿತು ಹೆಚ್ಚಿನ ಅಧ್ಯಯನಗಳು ಆರಂಭವಾದವು. 1974ರಲ್ಲಿ ಮೊದಲ ಬಾರಿಗೆ ಜಾನಪದ ಎಂ.ಎ. ತರಗತಿಗಳನ್ನು ಆರಂಭಿಸಲಾಯಿತು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಸಂಶೋಧನೆಗಾಗಿಯೇ ಕ್ಷೇತ್ರಜ್ಞರನ್ನೂ ನೇಮಕಗೊಳಿಸಿ ಜಾನಪದ ವಿಭಾಗದ ಸಂಶೋಧನಾಂಗವನ್ನು ಆರಂಬಿsಸಲಾಯಿತು (1970). ಜಾನಪದ ಸಂಗ್ರಹ ಮತ್ತು ಸಂಪಾದನೆ ಇದರ ಮುಖ್ಯ ಗುರಿಯಾಗಿತ್ತು. ಇದರೊಂದಿಗೆ ಸಂಶೋಧನೆಗಳೂ ಆರಂಭವಾದವು.

ಜಾನಪದ ಸಂಗ್ರಹವೆಂದರೆ ಬರಿಯ ಸಾಹಿತ್ಯ ಕೃತಿಗಳ ಸಂಗ್ರಹವಲ್ಲ. ಜನಪದ ಸಂಸ್ಕೃತಿಗೆ ಸಂಬಂಧಿಸಿದ ಸಕಲ ಸಾಮಗ್ರಿಗಳ ಸಂಗ್ರಹ. ಈ ನಿಟ್ಟಿನಲ್ಲಿ ಜಾನಪದ ವಿಭಾಗ ಗಮನೀಯವಾದ ಕಾರ್ಯವನ್ನು ಸಾದಿsಸಿದೆ. ಅನೇಕ ಪ್ರದೇಶಗಳ ವೈವಿಧ್ಯಮಯವಾದ ಅಪಾರ ಜನಪದ ಗೀತೆಗಳನ್ನು ಧ್ವನಿಮುದ್ರಣ ಮಾಡಿಕೊಳ್ಳಲಾಗಿದೆ. ಜಾನಪದದ ಸಾಹಿತ್ಯಕಬಗೆ, ಭಾಷಿಕ ಬಗೆ, ವೈಜ್ಞಾನಿಕ ಬಗೆ, ಕ್ರಿಯಾತ್ಮಕ ಬಗೆಗಳಿಗೆ ಸಂಬಂದಿsಸಿದಂತೆ ಕಥೆ, ಗೀತೆ, ಲಾವಣಿ, ಗಾದೆ, ರಂಗೋಲಿ, ಕಸೂತಿ, ವಾಸ್ತುಶಿಲ್ಪ, ವೃತ್ತಿ ಕಲೆಗಳು, ಬುಡಕಟ್ಟುಗಳು, ಒಗಟು, ನಂಬಿಕೆ, ಸಂಪ್ರದಾಯ, ವೈದ್ಯ, ಅಡುಗೆ, ಉಡುಗೆ, ತೊಡುಗೆ- ಹೀಗೆ ಜನಪದ ಜೀವನದ ಎಲ್ಲಾ ಸ್ತರಗಳ ಅಧ್ಯಯನ ನಡೆಯುತ್ತ ಬಂದಿದೆ.

ಕನ್ನಡ ಸಾಹಿತ್ಯ ಚರಿತ್ರೆಯ ಯೋಜನೆ: 1964ರಲ್ಲಿ ಸಮಗ್ರವಾದ ಕನ್ನಡ ಸಾಹಿತ್ಯ ಚರಿತ್ರೆಯ ರಚನೆಯ ಯೋಜನೆ ಹಾಕಿದವರು ದೇಜಗೌ ಅವರು. ಒಂದು ದಶಕದ ಅನಂತರ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆಯ ಮೊದಲ ಸಂಪುಟ ಹೊರಬಂತು (1974). ಹಾ.ಮಾ.ನಾ. ಇದರ ಪ್ರಧಾನ ಸಂಪಾದಕರು. ಹತ್ತು ಸಂಪುಟಗಳ ಹರವುಳ್ಳ ಈ ಸಾಹಿತ್ಯ ಚರಿತ್ರೆಯ ಸಿದ್ಧತೆಯಲ್ಲಿ ತೀ.ನಂ.ಶ್ರೀ. ಹಾಕಿಕೊಟ್ಟ ರೂಪರೇಖೆಗಳ ಅನೇಕ ಅಂಶಗಳನ್ನು ಯಥಾವತ್ತಾಗಿ ಸ್ವೀಕರಿಸಿ, ಅಗತ್ಯವೆನಿಸಿದ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಈವರೆಗೆ ಐದು ಸಂಪುಟಗಳು ಪ್ರಕಟಗೊಂಡಿವೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಶಾಸ್ತ್ರೀಯ ಭಾಷಾ ಧನಸಹಾಯವುಳ್ಳ ಶಾಸ್ತ್ರೀಯ ಭಾಷಾ ಕ್ರಿಯಾ ಯೋಜನೆಯಡಿ ಪೂರ್ಣಗೊಂಡ ಯೋಜನೆಗಳ ವಿವರಗಳು ಇಂತಿವೆ: 

1. ಕರ್ನಾಟಕ ಅರಸು ಮನೆತನಗಳ ಶಾಸನ ಸಂಪುಟಗಳು 

2.ಕನ್ನಡ ವಿಶ್ವಕೋಶಗಳಲ್ಲಿ ಪ್ರಕಟವಾದ ಲೇಖನಗಳ ವಿಷಯವಾರು ಗ್ರಂಥಗಳ ಪ್ರಕಟಣೆ 

3.ಕನ್ನಡ ವಿಷಯ ವಿಶ್ವಕೋಶ ಕರ್ನಾಟಕ ಸಂಪುಟದ ಅನುವಾದ 

4.ಸಾಹಿತ್ಯ ಚಿಂತನೆಗಳ ಪಾರಿಭಾಷಿಕ ಪದವಿವರಣಾ ಕೋಶ

5ಕನ್ನಡ ಅನ್ಯಭಾಷಾ ಪದನಿಷ್ಪತ್ತಿ ಕೋಶ

6.ಹೊನ್ನ ಕೋಗಿಲೆ 

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಸಹಾಯದೊಂದಿಗೆ `ಪಾಶ್ಚಾತ್ಯ ಕಾವ್ಯಮೀಮಾಂಸೆಯ ಇತಿಹಾಸ’ ಎಸ್‍ಎಪಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿತು. ತದನಂತರ ಕನ್ನಡ ಜಾನಪದ ಅಧ್ಯಯನದ ಇತಿಹಾಸ ಹಾಗೂ ಆಧುನಿಕ ಕನ್ನಡ ವಿಮರ್ಶೆಯ ಇತಿಹಾಸ ಎಸ್‍ಎಪಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದರೊಟ್ಟಿಗೆ `ಇಂಡಿಜಿನಿಯಸ್ ನಾಲಡ್ಜ್ ಆಫ್ ಓರಲ್ ಟ್ರಡೀಷನ್ ಆಫ್ ಷಡ್ಯೂಲ್ ಕಾಸ್ಟ್ ಅಂಡ್ ಷಡ್ಯೂಲ್ ಟ್ರೈಬ್ ವಿಮನ್ : ರೆಪ್ರಸೆಂಟಿವ್ ಮಾಡಲ್ಸ್ ಆಫ್ ಹಾಸನ, ಮಂಡ್ಯ, ಮೈಸೂರು ಅಂಡ್ ಚಾಮರಾಜನಗರ ಡಿಸ್ಟ್ರೀಕ್ಟ್’ ವಿಷಯ ಕುರಿತ ಮೇಜರ್ ರಿಸರ್ಚ್ ಪ್ರಾಜೆಕ್ಟ್‍ನ್ನು ಪೂರೈಸಲಾಗಿದೆ. 

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮತ್ತೊಂದು ಮಹತ್ವದ `ರಾಷ್ಟ್ರೀಯ ನೆಲೆಯ ಸಂಶೋಧನಾ ಯೋಜನೆ - ಡಿಐಟಿ ಮೇಜರ್ ರಿಸರ್ಚ್ ಪ್ರಾಜೆಕ್ಟ್’ ವಿಷಯ : ಡೆವಲಪ್‍ಮೆಂಟ್ ಆಫ್ ದ್ರವಿಡಿಯನ್ ವರ್ಡ್‍ನೆಟ್: ಅನ್ ಇಂಟಿಗ್ರೇಟೆಡ್ ವರ್ಡ್‍ನೆಟ್ ಫಾರ್ ತೆಲುಗು, ತಮಿಳು, ಕನ್ನಡ ಅಂಡ್ ಮಲಯಾಳಂ (ಎಕ್ಸ್‍ಕ್ಲೂಸಿವ್ ವರ್ಡ್‍ನೆಟ್ ಫಾರ್ ಕನ್ನಡ)

ಜಾನಪದ ವಸ್ತುಸಂಗ್ರಹಾಲಯ: ಇದು ದಕ್ಷಿಣ ಮತ್ತು ಪೂರ್ವ ಏಷ್ಯದಲ್ಲಿಯೇ ಅತಿ ದೊಡ್ಡದಾದ ಮತ್ತು ಸುಸಜ್ಜಿತವಾದ ವಸ್ತು ಸಂಗ್ರಹಾಲಯವೆಂದು ಪ್ರಸಿದ್ಧಿ ಪಡೆದಿದೆ. ದೇಜಗೌ ಮತ್ತು ಹಾಮಾನಾ ಅವರ ದೂರದೃಷ್ಟಿಯ ಫಲವಾಗಿ ಇದು ಸ್ಥಾಪನೆಯಾಯಿತು (1968). 1964ರಲ್ಲಿ ಹಾಮಾನಾ ಅವರು ಇಂಡಿಯಾನ ವಿಶ್ವವಿದ್ಯಾಲಯದಲ್ಲಿದ್ದಾಗ ಅಲ್ಲಿಯ ಜಾನಪದ ವಸ್ತುಸಂಗ್ರಹಾಲಯದಿಂದ ಪ್ರಭಾವಿತರಾಗಿದ್ದರು. ದೇಜಗೌ ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿಕೊಂಡಿದ್ದ ವಸ್ತುಗಳನ್ನು ದಾನವಾಗಿ ವಸ್ತುಸಂಗ್ರಹಾಲಯಕ್ಕೆ ಕೊಡುವುದರ ಮೂಲಕ ವಸ್ತುಸಂಗ್ರಹಾಲಯವೊಂದು ಮಾನಸಗಂಗೋತ್ರಿಯ ಜಯಲಕ್ಷ್ಮೀವಿಲಾಸದ ಕಟ್ಟಡದಲ್ಲಿ ಸ್ಥಾಪನೆಯಾಗಲು ಅಸ್ತಿಭಾರ ಹಾಕಿದರು. ನಾಡಿನ ಹೆಸರಾಂತ ಜಾನಪದ ವಿದ್ವಾಂಸರಲ್ಲೊಬ್ಬರಾದ ಜೀ.ಶಂ. ಪರಮಶಿವಯ್ಯ ಮತ್ತು ಪ್ರಸಿದ್ಧ ಚಿತ್ರ ಕಲಾವಿದರಾಗಿದ್ದ ಪಿ.ಆರ್.ತಿಪ್ಪೇಸ್ವಾಮಿ ಯು.ಎಸ್.ರಾಮಣ್ಣ, ಕ್ಯಾತನಹಳ್ಳಿ ರಾಮಣ್ಣ ಮತ್ತು ಟಿ.ಎಸ್.ರಾಜಪ್ಪ ಅವರು ಸಂಗ್ರಹಾಲಯವನ್ನು ಕಟ್ಟುವ ಕಾರ್ಯದಲ್ಲಿ ದುಡಿದಿದ್ದಾರೆ. ಇವರು ನಾಡಿನ ಮೂಲೆಮೂಲೆಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಮಠಮಾನ್ಯಗಳನ್ನೂ ಹಳೆಯ ಮನೆಗಳನ್ನೂ ಶೋದಿsಸಿ ವಸ್ತುಗಳನ್ನು ಸಂಗ್ರಹಿಸಿದರು. ಹೀಗೆ ತಂದ ವಸ್ತುಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಿ ಪ್ರದರ್ಶನಕ್ಕೆ ಇಡಲಾಗಿದೆ. 

ಈಗ ವಸ್ತುಸಂಗ್ರಹಾಲಯದಲ್ಲಿ ಸು.600 ವಸ್ತುಗಳು ಸಂಗ್ರಹ ಗೊಂಡಿವೆ. ಇಷ್ಟು ದೊಡ್ಡ ಮೊತ್ತದ ವಸ್ತುಗಳು ಬೇರಾವ ಜಾನಪದ ವಸ್ತುಸಂಗ್ರಹಾಲಯದಲ್ಲಿಯೂ ಇಲ್ಲ. ಕರ್ನಾಟಕದ ಸಾಂಸ್ಕೃತಿಕ ಮಹತ್ತ್ವದ ಈ ಸಂಗ್ರಹಾಲಯ ಪ್ರಮುಖವಾಗಿ ಕರ್ನಾಟಕಕ್ಕೂ ಆ ಮೂಲಕ ಭಾರತದ ಹಾಗೂ ವಿದೇಶಿ ಸಂಶೋಧಕರಿಗೂ ವಿದ್ವಾಂಸರಿಗೂ ಮೂರು ದಶಕಗಳಿಂದ ಸ್ಫೂರ್ತಿದಾಯಕ ಆಶ್ರಯವನ್ನು ನೀಡುತ್ತ ಬಂದಿದೆ. ಇದಕ್ಕೆ ನಿದರ್ಶನವೆಂಬಂತೆ 1985 ಮತ್ತು 1992ರಲ್ಲಿ ಇಂಗ್ಲೆಂಡಿನಲ್ಲಿ ಸಂಸ್ಥೆಯ ಜಾನಪದ ವಸ್ತುಸಂಗ್ರಹಾಲಯದ ವಸ್ತುಗಳು ಪ್ರದರ್ಶನಗೊಂಡಿದ್ದವು. ಬ್ರಿಟಿಷ್ ಸರ್ಕಾರ ಇದರ ವ್ಯವಸ್ಥೆ ಮಾಡಿತ್ತು. ಈ ವಿಭಾಗದಲ್ಲಿ ಸಾಹಿತಿಗಳ ಕೊಠಡಿ ಮತ್ತು 500ಕ್ಕೂ ಹೆಚ್ಚು ಕಲಾಕೃತಿಗಳುಳ್ಳ ಕಲಾಶಾಲೆಯೂ ಇದೆ. ಇನ್‍ಫೋಸಿಸ್ ಫೌಂಡೇಷನ್‍ನ ಮುಖ್ಯಸ್ಥರಾದ ಸುಧಾ ಮೂರ್ತಿ ಅವರ ಉದಾರ ದೇಣಿಗೆಯಿಂದಾಗಿ ಜಾನಪದ ವಸ್ತುಸಂಗ್ರಹಾಲಯವಿರುವ ಜಯಲಕ್ಷ್ಮೀವಿಲಾಸ ಕಟ್ಟಡ ನವೀಕರಣಗೊಂಡಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿತವಾದ ಬಳಿಕ ಇದೇ ಮಾದರಿಯ ಸಂಸ್ಥೆಗಳು ಕರ್ನಾಟಕ, ಬೆಂಗಳೂರು, ಗುಲ್ಬರ್ಗ, ಮತ್ತು ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿತವಾದುವು.      *

ಎಂ.ಎ ಕನ್ನಡ ಮೊದಲನೇಯ ವರ್ಷದ ವಿದ್ಯಾರ್ಥಿ ವೃಂದ

Location

The department is located at Manasagangotri postgraduate campus of the university. Click on the image below for a detailed map of the campus and the city.


To get the directions to the department scan the following QR code