ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ

ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರದು ಬಹುಮುಖಿ ಸಾಮಥ್ರ್ಯದ ಅಸಾಧಾರಣ ವ್ಯಕ್ತಿತ್ವ.  ಅವರು ಶ್ರೇಷ್ಠ ಅರ್ಥಿಕ ತಜ್ಞ, ಸಂವಿಧಾನ ತಜ್ಞ, ಸಾಮಾಜಿಕ ಪರಿವರ್ತನಕಾರ, ರಾಜಕೀಯ ಚಿಂತಕ, ತಳಸಮುದಾಯಗಳ ವಿಮೋಚಕ, ಮುಖ್ಯವಾಗಿ ಮಹಾಮಾನವತಾವಾದಿ.  ಭಾರತದ ಸಂವಿಧಾನವು ಉದಾರವಾದಿ ಸಂವಿಧಾನವಾಗುವಲ್ಲಿ ಅಂಬೇಡ್ಕರ್ ಅವರ ಕಾಳಜಿ ಅನನ್ಯ.  ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಗೆಗಿನ ಒಲವುಳ್ಳ ಆಧುನಿಕ ಚಿಂತಕರಲ್ಲಿ ಅಂಬೇಡ್ಕರ್ ಅವರದು ಪ್ರಮುಖ ಹೆಸರು.  ಅವರ ಪ್ರಕಾರ “ಯಾವುದೇ ರಕ್ತಪಾತವಿಲ್ಲದೆ ಜನರ ಸಾಮಾಜಿಕ- ಆರ್ಥಿಕ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದೇ ಪ್ರಜಾತಂತ್ರ ವ್ಯವಸ್ಥೆ”.  ಅಂಬೇಡ್ಕರ್ ಅವರ ಈ ಚಿಂತನೆಯೇ ಅವರಿಗಿದ್ದ ಬದ್ಧತೆಯನ್ನು ಸೂಚಿಸುತ್ತದೆ.  ಎಲ್ಲಾ ಬಗೆಯ ತಾರತಮ್ಯಗಳನ್ನು ಇನ್ನಿಲ್ಲವಾಗಿಸುವ ಹಾಗೂ ಜಾತ್ಯತೀತ ಭಾರತದ ನಿರ್ಮಾಣ ಅಂಬೇಡ್ಕರ್ ಅವರ ದರ್ಶನವಾಗಿತ್ತು. 

 

ಮೈಸೂರು ವಿಶ್ವವಿದ್ಯಾನಿಲಯವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮಶತಮಾನೋತ್ಸವದ ನೆನಪಿನ ಅಂಗವಾಗಿ 1994ರಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪೀಠವನ್ನು ಸ್ಥಾಪನೆ ಮಾಡುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿತು.  ಮುಂದುವರೆದು 2000ನೇ ಸಾಲಿನಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರವನ್ನು ಪ್ರತ್ಯೇಕವಾಗಿ ಆರಂಭಿಸಿಅದಕ್ಕೆ ಒಬ್ಬರು ಗೌರವ ನಿರ್ದೇಶಕರನ್ನು, ಒಬ್ಬರು ಪ್ರಥಮ ದರ್ಜೆ ಸಹಾಯಕರನ್ನು, ಒಬ್ಬರು ಸೇವಕ ಹಾಗೂ ಒಬ್ಬರು ಸ್ವೀಪರ್ ನೇಮಿಸಿ ಇನ್ನಷ್ಟು ಅರ್ಥಪೂರ್ಣವಾಗಿ ವಿಸ್ತರಿಸಿತು. ಪ್ರಾರಂಭದಲ್ಲಿ ಮಾನಸಗಂಗೋತ್ರಿಯ ಬೇರೊಂದು ಶೈಕ್ಷಣಿಕ ಕೇಂದ್ರದ ಕೊಠಡಿಯಲ್ಲಿ ಕಾರ್ಯಗತವಾಗಿದ್ದ ಅಂಬೇಡ್ಕರ್ ಕೇಂದ್ರವು ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಮಾಜಿ ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸನ್ಮಾನ್ಯ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ತುಂಬು ಕಾಳಜಿಯ ಕಾರಣದಿಂದ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಯಿತು.ಆಗ ಕೇಂದ್ರ ಸರ್ಕಾರದ ಸಚಿವರಾಗಿದ್ದ ಮಾನ್ಯ ಶ್ರೀ. ವಿ. ಶ್ರೀನಿವಾಸ ಪ್ರಸಾದ್ ಅವರ ಕೋರಿಕೆಯ ಮೇರೆಗೆ ಆಂಗ್ಲೋ-ಇಂಡಿಯನ್ ಸಂಸತ್ ಸದಸ್ಯರಾಗಿದ್ದ ಚೆನ್ನೈನ ಡಾ.ಬೆಟ್ರಿಕ್ಸ್ ಡಿ. ಸೌಜನ್ಯ ಅವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.30 ಲಕ್ಷಗಳ ಅನುದಾನವನ್ನು ನೀಡುವ ಮೂಲಕ ಅಂಬೇಡ್ಕರ್ ಕೇಂದ್ರವು ಸ್ವಂತ ಕಟ್ಟಡವನ್ನು ಹೊಂದಿತು.ವಿಶ್ವವಿದ್ಯಾನಿಲಯವು 2003ರ ಸಂದರ್ಭದಲ್ಲಿ ರಿಡಿಪ್ಲಾಯ್‍ಮೆಂಟ್ ಮೂಲಕ ಎರಡು ಬೋಧಕ ಹುದ್ದೆಗಳನ್ನು ಸೃಷ್ಠಿಸಿ ಪ್ರವಾಚಕರಾಗಿ ಡಾ. ಜೆ. ಸೋಮಶೇಖರ್ ಹಾಗೂ ಉಪನ್ಯಾಸಕರಾಗಿ ಡಾ. ಎಸ್. ನರೇಂದ್ರಕುಮಾರ್ ಅವರನ್ನು ಖಾಯಂ ಆಗಿ ನೇಮಿಸಿಕೊಂಡು ಕೇಂದ್ರಕ್ಕೆ ಭದ್ರ ಬುನಾದಿ ಹಾಕಿತು.  ಪ್ರಸ್ತುತ ಡಾ. ಬಿ. ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರವು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳು ಕೆಲಸ ನಿರ್ವಹಿಸುತ್ತಿರುವ ಮಾನಸಗಂಗೋತ್ರಿಯ ಆವರಣದಲ್ಲಿ ಕರ್ತವ್ಯ ನಿರತವಾಗಿದೆ.